ಮುಂಬೈ, ಏ01(SS): ರಾಜ್ಯದ ಮಂಗಳೂರಿನಲ್ಲಿ ಸ್ಥಾಪನೆಗೊಂಡು ಬಳಿಕ ರಾಷ್ಟ್ರೀಕೃತ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದ್ದ ವಿಜಯ ಬ್ಯಾಂಕ್ನ ಅಸ್ತಿತ್ವ ಇಂದಿನಿಂದ (ಏ01) ನಾಶವಾಗಲಿದ್ದು, ಇನ್ಮುಂದೆ ಅದು ಬ್ಯಾಂಕ್ ಆಫ್ ಬರೋಡಾ ಎಂಬ ಹೆಸರಿನಲ್ಲಿ ಕಾರ್ಯಾಚರಿಸಲಿದೆ.
ನಗರದಲ್ಲಿ ಜನ್ಮ ತಾಳಿದ ವಿಜಯ ಬ್ಯಾಂಕ್ನ ಹೆಸರು ಇಂದಿನಿಂದ ಅಳಿಸಿಹೋಗಲಿದೆ. ವಿಜಯ ಬ್ಯಾಂಕಿನ ಶಾಖೆಗಳ ಎದುರು ಬ್ಯಾಂಕ್ ಆಫ್ ಬರೋಡಾದ ಹೆಸರು ರಾರಾಜಿಸಲಿದೆ. ವಿಜಯದಶಮಿ ದಿನದಂದು ತುಳುನಾಡು ಮಂಗಳೂರಿನಲ್ಲಿ ಆರಂಭವಾಗಿ ದೇಶದೆದೆಲ್ಲೆಡೆ ತನ್ನ ಶಾಖೆಗಳನ್ನು ವಿಸ್ತರಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಮಾರು 88 ವರ್ಷಗಳ ಸೇವೆ ಸಲ್ಲಿಸಿತ್ತು ಈ ವಿಜಯ ಬ್ಯಾಂಕ್. ಆದರೆ ಕರಾವಳಿಯ ಹೆಮ್ಮೆಯ ವಿಜಯ ಬ್ಯಾಂಕ್ ಇನ್ನು ನೆನಪು ಮಾತ್ರ.
ಬ್ಯಾಂಕ್ ಆಫ್ ಬರೋಡಾದೊಂದಿಗೆ ಕರ್ನಾಟಕ ಮೂಲದ ವಿಜಯ ಬ್ಯಾಂಕ್ ಹಾಗೂ ಮಹಾರಾಷ್ಟ್ರ ಮೂಲದ ದೇನಾ ಬ್ಯಾಂಕ್ ಅನ್ನು ವಿಲೀನಗೊಳಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶಿಸಿತ್ತು. ಇದೀಗ ಈ ನಿರ್ಧಾರ ಇಂದಿನಿಂದ (ಏಪ್ರಿಲ್ 1, 2019) ಜಾರಿಗೆ ಬರಲಿದೆ.
ಇಂದಿನಿಂದ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಶಾಖೆಗಳು ಬ್ಯಾಂಕ್ ಆಫ್ ಬರೋಡಾ ಹೆಸರಿನಲ್ಲಿ ಕಾರ್ಯಾಚರಿಸಲಿವೆ. ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗ್ರಾಹಕರೆಲ್ಲರನ್ನೂ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರೆಂದು ಪರಿಗಣಿಸಲಾಗುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.
ವಿಲೀನ ಪ್ರಕ್ರಿಯೆಯ ನಿಯಮದ ಪ್ರಕಾರ ವಿಜಯ ಬ್ಯಾಂಕ್ನ ಷೇರುದಾರರು ತಾವು ಹೊಂದಿರುವ 1 ಸಾವಿರ ಷೇರುಗಳಿಗೆ ಪರ್ಯಾಯವಾಗಿ ಬ್ಯಾಂಕ್ ಆಫ್ ಬರೋಡಾದ 402 ಷೇರುಗಳು ಹಾಗೂ ದೇನಾ ಬ್ಯಾಂಕ್ನ ಷೇರುದಾರರು ಪ್ರತಿ 1 ಸಾವಿರ ಷೇರುಗಳಿಗೆ ಬ್ಯಾಂಕ್ ಆಫ್ ಬರೋಡಾದ 110 ಷೇರುಗಳನ್ನು ಪಡೆದುಕೊಳ್ಳಲಿದ್ದಾರೆ.