ಚಾಮರಾಜನಗರ, ಜೂ 09 (DaijiworldNews/SM) : ಗುತ್ತಿಗೆದಾರರಿಗೆ ಶಾಲಾ ಕಟ್ಟಡದ ಕಾಮಗಾರಿಗೆ ಬಿಲ್ ಮಂಜೂರು ಮಾಡಿಕೊಡಲು 30 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಲೋಕೋಪಯೋಗಿ ಇಲಾಖೆ ಸಹಾಯಕ ಇಂಜಿನಿಯರ್ ಮಧುಸೂದನ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೆಂಪರಾಜು ಅವರು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಲೋಕಾಯುಕ್ತ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ತಾಲೂಕಿನ ಬಾಗಳಿ ಗ್ರಾಮದ ಸರ್ಕಾರಿ ಶಾಲೆಯ ಕಟ್ಟಡದ ಕಾಮಗಾರಿಯನ್ನು ಸೂರ್ಯ ಬಿಲ್ಡರ್ನ ಸುನೀಲ್ಕುಮಾರ್ ಎಂಬ ಗುತ್ತಿಗೆದಾರರು ನಿರ್ವಹಿಸಿದ್ದರು. ಈ ಕಾಮಗಾರಿಯ ಬಿಲ್ ಹಣವನ್ನು ಮಂಜೂರು ಮಾಡಿಕೊಡಲು ಇಬ್ಬರೂ ಅಧಿಕಾರಿಗಳು ಸುನೀಲ್ ಕುಮಾರ್ ಅವರಿಂದ 30 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಶುಕ್ರವಾರ ಸಂಜೆ ಲಂಚ ಸ್ವೀಕರಿಸುವಾಗ ಇಬ್ಬರನ್ನೂ ಕುದೇರು ಬಳಿ ವಶಕ್ಕೆ ಪಡೆಯಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.