ತುಮಕೂರು, ಏ01(SS): ಇಂದು (ಏ.1) ಶತಮಾನದ ಸಂತ, ನಡೆದಾಡುವ ದೇವರು ಎಂದೇ ಜನಜನಿತರಾಗಿದ್ದ ಸಿದ್ಧಗಂಗೆಯ ಶ್ರೀ ಶಿವಕುಮಾರ ಸ್ವಾಮೀಜಿಗಳ 112ನೇ ಜನ್ಮದಿನ.
ತುಮಕೂರಿನಲ್ಲಿಂದು ಸ್ವಾಮೀಜಿಗಳು ಇಲ್ಲ ಎನ್ನುವ ನೋವಿನಲ್ಲೂ ಅವರ ನೆನಪನ್ನು ಮರುಕಳಿಸುವ ಹಲವು ಕಾರ್ಯಕ್ರಮಗಳು ನಡೆಯಲಿವೆ. ವಿಶೇಷ ಅಂದರೆ “ದೇವರ” ಹುಟ್ಟುಹಬ್ಬದಂದು 112 ಮಕ್ಕಳಿಗೆ ಶಿವಕುಮಾರ ಶ್ರೀಗಳ ಹೆಸರನಿಟ್ಟು ನಾಮಕರಣ ಮಾಡಲಾಗುತ್ತಿದೆ.
ಹಸುಗೂಸಿನಿಂದ ಹಿಡಿದು 6 ತಿಂಗಳವರೆಗಿನ ಮಕ್ಕಳ ಪೋಷಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರು ಎಲ್ಲಾ 112 ಮಕ್ಕಳಿಗೆ ಆಶೀರ್ವಚನ ನೀಡಲಿದ್ದಾರೆ. ವಿಶೇಷವೆಂದರೆ ಮಕ್ಕಳಿಗೆ ತೊಟ್ಟಿಲು, ಶ್ರೀಗಳ ಭಾವಚಿತ್ರ ಇರುವ ಬೆಳ್ಳಿ ನಾಣ್ಯ, ಹೊಸ ಉಡುಪು, ಹೊಸ ಹಾಸಿಗೆಯನ್ನು ನೀಡಲಾಗುವುದು.
ಸ್ವಾಮೀಜಿಗಳು ತಮ್ಮ ಬಾಳನ್ನು ಶ್ರೀಗಂಧದಂತೆ ತೇಯ್ದು ನಿರ್ಗಮಿಸಿದ್ದಾರೆ. ಪ್ರತಿನಿತ್ಯ ತಮ್ಮ ಸುತ್ತಮುತ್ತಲಿನ ಎಲ್ಲರಿಗೆ ಜ್ಞಾನ, ಅನ್ನ ಹಾಗೂ ವಿದ್ಯೆಯನ್ನು ಹಂಚುತ್ತಿದ್ದ ತ್ರಿವಿಧ ದಾಸೋಹಿ, ತುಂಬು ಬಾಳನ್ನು ಬದುಕಿದವರು. ಕಾಯಕ ವ್ಯಕ್ತಿಯ ಏಳ್ಗೆಯನ್ನು, ಸಮಾಜದ ಕಲ್ಯಾಣವನ್ನು ಮತ್ತು ಆತ್ಮವಿಶ್ವಾಸವನ್ನು ಪ್ರದಾನಿಸುವ ಅಮೂಲ್ಯ ತತ್ವ, ದೇಹ ಮನಸ್ಸುಗಳನ್ನು ಪವಿತ್ರ ಮಾಡುವ ಶುದ್ಧ ಸಂಜೀವಿನಿ ಎಂದು ಸಾರುತ್ತಿದ್ದ ಅವರು ಕೊನೆಯ ಕ್ಷಣದವರೆಗೂ ಕಾಯಕದ ಮಹತ್ವವನ್ನು ಸಾರುವ ಶರಣರ ವಚನಗಳನ್ನು ಅನುಸರಿಸಿ ಬದುಕಿದವರು. ಇಂದು ಶಿವಕುಮಾರ ಸ್ವಾಮೀಜಿಗಳ 112ನೇ ಜಯಂತಿ.
ಈ ಹಿನ್ನೆಲೆಯಲ್ಲಿ, ತುಮಕೂರು ನಾಗರಿಕ ವೇದಿಕೆ ಇಂದು ಶ್ರೀ ಶಿವಕುಮಾರ ಸ್ವಾಮೀಜಿ ಅವರ 112ನೇ ಜನ್ಮದಿನೋತ್ಸವ ಹಾಗೂ ಗುರುವಂದನಾ ಸಮಾರಂಭ ಆಯೋಜಿಸಿದೆ.