ಬೆಂಗಳೂರು, ಮಾ 31(SM): 2014ರ ಚುನಾವಣೆ ಮುನ್ನ ಮೋದಿ ಎಲ್ಲರ ಖಾತೆಗೆ 15 ಲಕ್ಷ ನೀಡುತ್ತೇನೆ ಎಂದು ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೇರಿದ್ದರು. ಆದರೆ ಕಾಂಗ್ರೆಸ್ ‘ನ್ಯಾಯ’ ಯೋಜನೆಯ ಮೂಲಕ ಜನಸಾಮಾನ್ಯರಿಗೆ ನ್ಯಾಯ ಒದಗಿಸಲಿದೆ. ದೇಶದ ಶೇ.20 ಭಾಗವಿರುವ ಬಡವರಿಗೆ ವರ್ಷಕ್ಕೆ 72 ಸಾವಿರ ರೂ. ಹಣ ನೀಡಲಿದೆ. ಈ ಯೋಜನೆ 5 ಕೋಟಿ ಫಲಾನುಭವಿಗಳಿಗೆ ಸಿಗಲಿದೆ. ಮುಂದಿನ ಐದು ವರ್ಷಗಳಲ್ಲಿ ಬಡತನವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಾಂಗ್ರೆಸ್ ಅಣಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಳೆದ ಐದು ವರ್ಷಗಳಲ್ಲಿ ದೇಶದ ಬಡವರು, ಸಣ್ಣ ವ್ಯಾಪಾರಿಗಳಿಗೆ ಮತ್ತು ರೈತರಿಗಾಗಿ ಯಾವ ಯೋಜನೆಗಳನ್ನು ಕೇಂದ್ರ ಸರಕಾರ ನೀಡಿಲ್ಲ. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕೇವಲ 15 ಉದ್ಯಮಿಗಳ ಅಭಿವೃದ್ಧಿಗಾಗಿ ಕೆಲಸ ಮಾಡಿದೆ. ರಫೇಲ್ ಡೀಲ್ ಅನಿಲ್ ಅಂಬಾನಿಗೆ ನೀಡಲು ಕೇಂದ್ರ ಸರಕಾರ ಡೀಲ್ ನಡೆಸಿತ್ತು. ಎಲ್ಲ ಕಾನೂನುಗಳನ್ನು ಉಲ್ಲಂಘಿಸಿ 30 ಸಾವಿರ ಕೋಟಿ ಹಣವನ್ನು ಅವರ ಜೇಬಿನಲ್ಲಿ ಹಾಕಿದರು.
ರೈತರ ಸಾಲಮನ್ನಾ ಮಾಡಲು ಹಣ ಇಲ್ಲವೆಂದು ಮೋದಿ ಮತ್ತು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳುತ್ತಿದ್ದಾರೆ. ಆದರೆ, 15 ಉದ್ಯಮಿಗಳ ಮೂರುವರೆ ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಲು ಕೇಂದ್ರದ ಬಳಿ ಹಣವಿದೆ ಎಂದು ವ್ಯಂಗ್ಯವಾಡಿದರು.