ಒಡಿಶಾ, ಜೂ 09 (DaijiworldNews/MS): ಒಡಿಶಾದ ಬಾಲಸೋರ್ ನಲ್ಲಿ ಸಂಭವಿಸಿದ ರೈಲು ದುರಂತ ಮರೆಯುವ ಮುನ್ನವೇ, ನೌಪಾದಾ ಜಿಲ್ಲೆಯ ದುರ್ಗ್ ಪುರಿ ಎಕ್ಸ್ಪ್ರೆಸ್ನ ಬೋಗಿಯೊಳಗೆ ಗುರುವಾರ ಸಣ್ಣ ಬೆಂಕಿ ಕಾಣಿಸಿಕೊಂಡು ಪ್ರಯಾಣಿಕರು ಭಯಭೀತರಾದ ಘಟನೆ ನಡೆದಿದೆ.
ದುರ್ಗ್ ಪುರಿ ಎಕ್ಸ್ಪ್ರೆಸ್ ಗುರುವಾರ ಸಂಜೆ ಖರಿಯಾರ್ ರಸ್ತೆ ನಿಲ್ದಾಣಕ್ಕೆ ತಲುಪುತ್ತಿದ್ದಂತೆ ರೈಲಿನ ಬಿ3 ಕೋಚ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ರೈಲ್ವೆ ಅಧಿಕಾರಿಗಳು ಒಂದು ಗಂಟೆಯೊಳಗೆ ಸಮಸ್ಯೆಯನ್ನು ಸರಿಪಡಿಸಿ ರೈಲು ರಾತ್ರಿ 11 ಗಂಟೆಗೆ ನಿಲ್ದಾಣದಿಂದ ಹೊರಟಿತು. ಹೊಗೆ ಪತ್ತೆಯಾದಾಗ ಅನೇಕ ಪ್ರಯಾಣಿಕರು ರೈಲಿನಿಂದ ಹೊರಬಂದರು, ಜನರು ಭಯಭೀತರಾಗಿದ್ದರು.
ಘಟನೆಯಲ್ಲಿ ಯಾವುದೇ ಗಾಯ ಅಥವಾ ಪ್ರಾಣಹಾನಿ ಸಂಭವಿಸಿಲ್ಲ ಎಂದು ರೈಲ್ವೆ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಇಲಾಖೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಬ್ರೇಕ್ ಪ್ಯಾಡ್ಗಳಿಗೆ ಬೆಂಕಿ ಹತ್ತಿಕೊಂಡಿತು. ಬೆಂಕಿಯು ಬ್ರೇಕ್ ಪ್ಯಾಡ್ಗಳಿಗೆ ಸೀಮಿತವಾಗಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿಸಲಾಗಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ರೈಲು ದುರಂತವು 288 ಜನರನ್ನು ಬಲಿತೆಗೆದುಕೊಂಡಿತ್ತು ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ನಡೆದು ಕೆಲವೇ ದಿನಗಳಲ್ಲಿ ಈ ಘಟನೆ ನಡೆದಿದೆ.