ಕಟಕ್, ಜೂ 08 (DaijiworldNews/HR): ಜೂನ್ 2ರಂದು ಸಂಭವಿಸಿದ ಒಡಿಶಾ ರೈಲು ಅಪಘಾತದಲ್ಲಿ ಗಾಯಗೊಂಡು, ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗ ದೂರದರ್ಶನವೊಂದರಲ್ಲಿ ಪ್ರಸಾರವಾಗುತ್ತಿದ್ದ ನೇರ ಸಂದರ್ಶನ ಪ್ರಸಾರದಿಂದ ಮತ್ತೆ ತಂದೆ - ತಾಯಿ ಜೊತೆ ಸೇರಿದ್ದಾನೆ.
ಜೂನ್ 2ರಂದು ಸಂಭವಿಸಿದ್ದ ಒಡಿಶಾ ರೈಲು ದುರಂತದಲ್ಲಿ ಕೋರಮಂಡಲ್ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 15 ವರ್ಷದ ಬಾಲಕನು ನೇಪಾಳದಿಂದ ಆಗಮಿಸಿದ್ದ ತನ್ನ ತಂದೆ-ತಾಯಿಯರೊಂದಿಗೆ ಒಂದುಗೂಡಲು ನಂತರ ಆಸ್ಪತ್ರೆಯು ವ್ಯವಸ್ಥೆ ಮಾಡಿಕೊಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಾಲಕನ ತಂದೆ ಹರಿ ಪಾಸ್ವಾನ್, "ನನ್ನ ಮಗ ನಮ್ಮ ಮೂವರು ಸಂಬಂಧಿಕರೊಂದಿಗೆ ಪ್ರಯಾಣಿಸುತ್ತಿದ್ದ. ಅವರೆಲ್ಲ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಆದರೆ, ನನ್ನ ಪುತ್ರ ಮಾತ್ರ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾನೆ" ಎಂದಿದ್ದಾರೆ.
ಇನ್ನು ಭುವನೇಶ್ವರಕ್ಕೆ ಆಗಮಿಸಿದ್ದ ದಂಪತಿಗಳು, ತಮ್ಮ ಪುತ್ರನಿಗಾಗಿ ಒಂದರ ನಂತರ ಒಂದು ಆಸ್ಪತ್ರೆಗೆ ಭೇಟಿ ನೀಡಿದ್ದರು. ಭುವನೇಶ್ವರದ ಏಮ್ಸ್ ಆಸ್ಪತ್ರೆಯಲ್ಲಿ ಆ ದಂಪತಿಗಳು ಸ್ಥಳೀಯ ದೂರದರ್ಶನ ವಾಹಿನಿಯೊಂದರ ಸಂಪರ್ಕಕ್ಕೆ ಬಂದು, ಆತ ಅವರ ಅಳಲನ್ನು ವರದಿ ಮಾಡಿದ್ದರು. ಈ ವರದಿಯನ್ನು ವಾಹಿನಿಯಲ್ಲಿ ವೀಕ್ಷಿಸಿದ್ದ ಬಾಲಕನು ತನ್ನ ಪೋಷಕರ ಗುರುತು ಹಿಡಿದಿದ್ದ. ನಂತರ ಆತ ಈ ಕುರಿತು ಆಸ್ಪತ್ರೆಯ ಪ್ರಾಧಿಕಾರಗಳಿಗೆ ಮಾಹಿತಿ ನೀಡಿ ಇದೀಗ ಮತ್ತೆ ತಂದೆ ತಾಯಿಯ ಜೊತೆ ಸೇರಿದ್ದಾನೆ.