ಶಿವಮೊಗ್ಗ, ಜೂ 08 (DaijiworldNews/HR): ಬಿಜೆಪಿ ಅನೈತಿಕ ಸರ್ಕಾರ ಮಾಡಿದ ನಂತರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದ್ದಾರೆ. ಶಿಕ್ಷಣ ವ್ಯವಸ್ಥೆಯನ್ನೇ ಸಂಪೂರ್ಣ ಕೇಸರಿಕರಣ ಮಾಡಲು ಹೊರಟಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷಾಂತರ ಮಂದಿ ಪ್ರಾಣತ್ಯಾಗ ಮಾಡಿ ಸ್ವಾತಂತ್ರ್ಯ ತಂದಿದ್ದಾರೆ. ಆ ಹೋರಾಟ ಮಾಡಿದವರಿಗೆ ಅಪಮಾನ ಮಾಡುತ್ತಿದ್ದಾರೆ. ಬ್ರಿಟಿಷರಿಗೆ ಆರು ಬಾರಿ ಕ್ಷಮಾಪಣೆ ಪತ್ರ ಯಾಕೆ ಕೊಟ್ಟರು ಎಂದು ಬಿಜೆಪಿ ಮತ್ತು ಆರ್ ಎಸ್ಎಸ್ ನಾಯಕರು ಮೊದಲು ಹೇಳಲಿ ಎಂದರು.
ಇನ್ನು ಪಠ್ಯಪುಸ್ತಕ ಒಂದೇ ಅಲ್ಲ,ಭಾರತ ಸಾವಿರಾರು ವರ್ಷದಿಂದ ಜಾತ್ಯತೀತ ರಾಷ್ಟ್ರವಾಗಿ ಉಳಿದುಕೊಂಡಿದೆ. ಇದರ ಅರಿವಿಲ್ಲದೇ ವ್ಯವಸ್ಥೆ ಬುಡಮೇಲು ಮಾಡಲು ಬಿಜೆಪಿ ಹೊರಟಿತ್ತು. ಎಲ್ಲಾ ಕಡೆ ಬಿಜೆಪಿ, ಆರ್ ಎಸ್ಎಸ್ ತಮ್ಮ ಸಿದ್ದಾಂತವನ್ನು ತೂರಲು ಪ್ರಯತ್ನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೈತಿಕ ಪೊಲೀಸ್ ಗಿರಿ ವಿಚಾರವಾಗಿ ಮಾತನಾಡಿದ ಅವರು, ನೈತಿಕ ಪೊಲೀಸ್ ಗಿರಿ ಇರುವುದು ಮಲೆನಾಡು, ಕರಾವಳಿ ಪ್ರದೇಶಗಳಲ್ಲಿ ಮಾತ್ರ. ಬಜರಂಗದಳ ವಿಚಾರದ ಬಗ್ಗೆ ನಮ್ಮ ನಿಲುವನ್ನ ನಾವು ಸ್ಪಷ್ಟಪಡಿಸಿದ್ದೇವೆ. ಬಜರಂಗ ದಳದ ಹೆಸರು ಅವರು ಹೇಳಿದ್ದಕ್ಕೆ ಜನ ಸೋಲಿಸಿ ಕಳಿಸಿದ್ದಾರೆ ಎಂದರು.