ಬೆಂಗಳೂರು, ಜೂ 06 (DaijiworldNews/MS): ನೂತನ ಸರ್ಕಾರದ ಚೊಚ್ಚಲ ಬಜೆಟ್ ಜುಲೈ 7 ರಂದು ಮಂಡಿಸುವುದಾಗಿ ಹೇಳಿರುವ ಸಿಎಂ ಸಿದ್ದರಾಮಯ್ಯ, ಇಂದಿನಿಂದ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆಗೆ ಬಜೆಟ್ ಪೂರ್ವ ಸಿದ್ಧತೆ ಆರಂಭಿಸಿದ್ದಾರೆ.
ಹಿಂದಿನ ಸರ್ಕಾರವಿದ್ದಾಗ ಆಗಿನ ಸಿಎಂ ಬೊಮ್ಮಾಯಿ ಎ.1 ರಿಂದ ಜು.31ರವರೆಗೆ ಅನ್ವಯವಾಗುವಂತೆ ಲೇಖಾನುದಾನ ಪಡೆದುಕೊಂಡು ೩.೦೯ ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡಿಸಿದ್ದರು. ಈಗ ಸಿದ್ದರಾಮಯ್ಯನವರು 8 ತಿಂಗಳುಗಳಿಗೆ ಬಜೆಟ್ ಮಂಡಿಸಬೇಕಾಗುತ್ತದೆ. ಹೀಗಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರು ಶಕ್ತಿಭವನದಲ್ಲಿ ಆರ್ಥಿಕ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ.
ಐದು ಗ್ಯಾರಂಟಿ ಯೋಜನೆ ಜೊತೆಗೆ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಸಭೆ ನಡೆಸಲಿದ್ದಾರೆ. ಬಜೆಟ್ ಅಧಿವೇಶನ ಬಗ್ಗೆ ಇನ್ನೂ ಕ್ಯಾಬಿನೆಟ್ನಲ್ಲಿ ತೀರ್ಮಾನ ಮಾಡಿಲ್ಲ. ಆದರೆ ಜುಲೈ 3 ರಂದು ಬಜೆಟ್ ಅಧಿವೇಶನ ಪ್ರಾರಂಭ ಆಗಲಿದೆ. 1 ವಾರ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು ಜುಲೈ 7 ರಂದು ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.