ಬೆಂಗಳೂರು, ಜೂ 04 (DaijiworldNews/MS): ಕರ್ನಾಟಕ ಕಾಂಗ್ರೆಸ್ ಘೋಷಣೆ ಮಾಡಿದ 5 ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ನಲ್ಲಿ ಉಚಿತ ಪ್ರಯಾಣ ಸಹ ಒಂದು. 'ಶಕ್ತಿ' ಹೆಸರಿನ ಈ ಯೋಜನೆಗೆ ಜೂನ್ 11ರಂದು ಚಾಲನೆ ಸಿಗಲಿದೆ. ಈ ಯೋಜನೆ ಜಾರಿಗೆ ತರಲು ಸರ್ಕಾರ ಸಕಲ ತಯಾರಿ ಮಾಡಿಕೊಳ್ಳುತ್ತಿದೆ.
ಜೂನ್ 11ರಂದು ಸಿಎಂ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಯೋಜನೆಗೆ ಚಾಲನೆ ನೀಡಲಿದ್ದಾರೆ. ಅಂದಿನಿಂದ ಮಹಿಳೆಯರು ರಾಜ್ಯದ್ಯಂತ ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು. ಆದರೆ ಉಚಿತವಾಗಿ ಸಂಚಾರ ನಡೆಸಬೇಕಾದರೂ ಟಿಕೆಟ್ ಪಡೆಯಬೇಕಿದೆ.
ಟಿಕೆಟ್ನಲ್ಲಿ ಯಾವುದೇ ಬೆಲೆ ನಮೂದಾಗಿರುವುದಿಲ್ಲ. ಆದ್ರೆ, ಎಲ್ಲಿಂದ ಎಲ್ಲಿಗೆ ಎನ್ನುವ ಮಾಹಿತಿ ಹಾಕಿ ನಿರ್ವಾಹಕರು ಟಿಕೆಟ್ ನೀಡಲಿದ್ದಾರೆ.ಸರ್ಕಾರ ಸಾರಿಗೆ ನಿಗಮಗಳಿಗೆ ಪ್ರತಿ ತಿಂಗಳು ಹಣ ನೀಡಲು ಲೆಕ್ಕ ಬೇಕಾಗಿರುವ ಕಾರಣದಿಂದ ಈ ಮಾರ್ಗ ಅನುಸರಿಸಲಾಗಿದೆ. ಜೊತೆಗೆ ಆಧಾರ್ ಕಾರ್ಡ್, ವೋಟರ್ ಐಡಿ ಅಥವಾ ರೇಷನ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.