ಬೆಂಗಳೂರು, ಜೂ 02 (DaijiworldNews/MS): ಗೃಹಜ್ಯೋತಿ ಯೋಜನೆ ಅಡಿ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು. ವರ್ಷದ ಸರಾಸರಿ ಆಧಾರದಲ್ಲಿ ಯಾರು 200 ಯುನಿಟ್ ಒಳಗಡೆ ವಿದ್ಯುತ್ ಬಳಸುತ್ತಾರೆ ಅವರು ಬಿಲ್ ಕಟ್ಟಬೇಕಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಸರ್ಕಾರದ 5 ಗ್ಯಾರೆಂಟಿ ಯೋಜನೆಗಳ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು 5 ಗ್ಯಾರೆಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿಗೆ ಮಾಡುತ್ತೇವೆ. ಗ್ಯಾರಂಟಿ ಜಾರಿ ವಿಚಾರದಲ್ಲಿ ಯಾವುದೇ ಧರ್ಮ, ಜಾತಿ, ಭಾಷೆ ತಾರತಮ್ಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ಮನೆಯ ಒಡತಿಗೆ 2 ಸಾವಿರ ರೂಪಾಯಿ ನೀಡುವ ಯೋಜನೆಗೆ ಫಲಾನುಭವಿಗಳು ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸಿದ ಬಳಿಕ ಆಗಸ್ಟ್ ನ 15ರಂದು ಇದು ಜಾರಿಯಾಗುವುದು ಇದು ಬಿಪಿಎಲ್ ಮತ್ತು ಎಪಿಎಲ್ ಕಾರ್ಡು ದಾರರು ವರ್ಗದ ಜನರಿಗೂ ಇದು ಅನ್ವಯವಾಗಲಿದೆ. ಜೂನ್ 15 ರಿಂದ ಜುಲೈ 15 ವರೆಗೆ ಅರ್ಜಿ ಸಲ್ಲಿಸಲು ಸಮಯವಾಕಶ ನೀಡಲಾಗುವುದು ಎಂದು ಹೇಳಿದ್ದಾರೆ.
ಕೆಲ ತಾಂತ್ರಿಕ ಸಮಸ್ಯೆಗಳಿರುವ ಕಾರಣ ಈ ಯೋಜನೆಗೆ ಅರ್ಜಿ ಆಹ್ವಾನಿಸಿ, ಮನೆಯ ಯಜಮಾನಿಯ ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಲಿಂಕ್ ಮಾಡಬೇಕು. ಜೂನ್ 15 ರಿಂದ ಜುಲೈ 15ರೊಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಯಾವುದೇ ಕಂಡೀಷನ್ ಇಲ್ಲದೆ ಗೃಹ ಲಕ್ಷ್ಮಿ ಯೋಜನೆ ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದ್ದಾರೆ
ಜುಲೈ 1 ರಿಂದ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ದಾರರಿಗೆ ‘ಅನ್ನಭಾಗ್ಯ’ ಯೋಜನೆಯಡಿ 10 ಕೆಜಿ ಅಕ್ಕಿ ವಿತರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಶಕ್ತಿ ಯೋಜನೆ: ಮಹಿಳೆಯರಿಗೆ ಎಸಿ ಬಸ್, ನಾನ್ ಎಸಿ ಸ್ಲೀಪರ್ , ಲಕ್ಸುರಿ ಬಸ್ ಹೊರತುಪಡಿಸಿ ಎಕ್ಸ್ ಪ್ರೆಸ್ ಬಸ್ ಸಹಿತ ರಾಜ್ಯಾದ್ಯಾಂತ ಉಚಿತ ಪ್ರಯಾಣ ಮಾಡಬಹುದು. ಈ ಯೋಜನೆ ಜೂ.11 ರಂದು ಜಾರಿಗೆ ಬರಲಿದೆ.