ಅಜ್ಮೇರ್, ಜೂ 01(DaijiworldNews/MS): "ಕಾಂಗ್ರೆಸ್ ನೀಡಿರುವ ಗ್ಯಾರಂಟಿಗಳು ದೇಶವನ್ನು ದಿವಾಳಿಯಾಗಿಸುತ್ತದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ಥಾನದ ಅಜ್ಮೇರ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದಿರುವ ಕರ್ನಾಟಕಕ್ಕೆ ಕಾಂಗ್ರೆಸ್ ನೀಡಿದ ಐದು ಭರವಸೆಗಳ ಬಗ್ಗೆ ಮಾತನಾಡಿದ್ದು ಸರ್ಕಾರದ ಸ್ಥಿರತೆಯ ಬಗ್ಗೆ ಪ್ರಶ್ನಿಸಿದ್ದಾರೆ. ಚುನಾವಣೆ ಗೆಲ್ಲಲು ಕಾಂಗ್ರೆಸ್ಗೆ ಹೊಸ ಗ್ಯಾರಂಟಿ ಸೂತ್ರವಿದೆ. ಆದರೆ, ಅವರು ತಮ್ಮ ಭರವಸೆಗಳನ್ನು ಪೂರೈಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದ್ದು, ಅವರ "ಗ್ಯಾರೆಂಟಿ ಫಾರ್ಮುಲಾ" ದೇಶವನ್ನು ದಿವಾಳಿಯಾಗಿಸುತ್ತದೆ' ಎಂದು ಆರೋಪಿಸಿದ್ದಾರೆ.
ಇನ್ನು ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ರಾಜಸ್ಥಾನದಲ್ಲಿ ಬುಧವಾರ ಪ್ರತಿ ಮನೆಗೂ 100 ಯುನಿಟ್ ಉಚಿತ ವಿದ್ಯುತ್ ನ ಭರವಸೆ ನೀಡಿದೆ.
"ಐವತ್ತು ವರ್ಷಗಳ ಹಿಂದೆ, ಕಾಂಗ್ರೆಸ್ ಬಡತನವನ್ನು ತೊಡೆದುಹಾಕುತ್ತದೆ ಎಂದು ಭರವಸೆ ನೀಡಿತು. ಆದರೆ, ಇದು ಬಡವರಿಗೆ ಮಾಡಿರುವ ದೊಡ್ಡ ದ್ರೋಹವಾಗಿದೆ. ಬಡವರನ್ನು ದಾರಿ ತಪ್ಪಿಸುವುದು ಮತ್ತು ವಂಚಿತರನ್ನಾಗಿ ಮಾಡುವುದು ಕಾಂಗ್ರೆಸ್ನ ನೀತಿಯಾಗಿದೆ" ಎಂದು ವಾಗ್ದಾಳಿ ನಡೆಸಿದ್ದಾರೆ.