ಬೆಂಗಳೂರು, ಮೇ 30 (DaijiworldNews/SM): ಹಿಂದಿನ ಸರ್ಕಾರದ ಅವಧಿಯಲ್ಲಿ ಕೇಳಿಬಂದಿರುವ ವಿವಿಧ ಹಗರಣಗಳ ಆರೋಪಗಳ ಬಗ್ಗೆ ಹೊಸದಾಗಿ ತನಿಖೆ ಪ್ರಾರಂಭಿಸಲು ಸಿದ್ದರಾಮಯ್ಯ ನೇತೃತ್ವದ ಸರಕಾರ ಮುಂದಾಗಿದೆ. ಅದರಂತೆ ಈ ಹಿಂದಿನ ಬೊಮ್ಮಾಯಿ ಸರಕಾರಕ್ಕೆ ಪಾಠ ಕಲಿಸಲು ಸಿದ್ದರಾಮಯ್ಯ ಸರಕಾರ ಮುಂದಾಗಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದ 36 ರೋಗಿಗಳು ಮೃತಪಟ್ಟಿದ್ದಕ್ಕೆ ಸಂಬಂಧಿಸಿದ ಆರೋಪ ಮತ್ತು ಇತರ ಹಗರಣಗಳ ಬಗ್ಗೆ ತನಿಖೆ ನಡೆಸುವಂತೆ ಇಲಾಖೆಯ ಅಧಿಕಾರಿಗಳಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳವಾರ ಸೂಚಿಸಿದರು. ದುರಂತ ಸಂಭವಿಸಿದ್ದ ಸಂದರ್ಭದಲ್ಲಿ ಡಾ. ಕೆ ಸುಧಾಕರ್ ಆರೋಗ್ಯ ಸಚಿವರಾಗಿದ್ದರು.
ಘಟನೆ ಸಂಬಂಧ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ (ಕೆಎಸ್ಎಲ್ಎಸ್ಎ) ಕೋವಿಡ್ ನಿರ್ವಹಣಾ ಸಮಿತಿಯು ಹೈಕೋರ್ಟ್ಗೆ ಈಗಾಗಲೇ ವರದಿ ಸಲ್ಲಿಸಿದ್ದು, ಮೇ 2-3, 2021 ರ ರಾತ್ರಿ 36 ಒಳರೋಗಿಗಳ ಸಾವಿಗೆ ಆಮ್ಲಜನಕದ ಲಭ್ಯತೆ ಕೊರತೆಯೇ ಕಾರಣ ಎಂದು ಉಲ್ಲೇಖಿಸಿದೆ.
ಈ ವಿಚಾರವಾಗಿ ವಿಧಾನಸೌಧದಲ್ಲಿ ತಮ್ಮ ಇಲಾಖೆಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಗುಂಡೂರಾವ್, ಸಾವಿಗೆ ಯಾರು ಹೊಣೆ ಮತ್ತು ತಪ್ಪಿತಸ್ಥರು ಯಾರು ಎಂಬುದರ ಪತ್ತೆಗೆ ಯಾವುದೇ ತನಿಖೆ ನಡೆದಿಲ್ಲ. ಹೀಗಾಗಿ ತಕ್ಷಣ ತನಿಖೆ ನಡೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಘಟನೆ ಸಂದರ್ಭ ಪ್ರತಿಪಕ್ಷವಾಗಿದ್ದ ಕಾಂಗ್ರೆಸ್, ಡಾ ಕೆ ಸುಧಾಕರ್ ಅವರನ್ನು ಗುರಿಯಾಗಿಸಿತ್ತು. ಆಸ್ಪತ್ರೆಗೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಾವು ಸಹಜವಲ್ಲ, ಕೊಲೆ ಎಂದು ಹೇಳಿದ್ದರು. ತಪ್ಪಿತಸ್ಥರನ್ನು ಶಿಕ್ಷಿಸುವಂತೆ ಒತ್ತಾಯಿಸಿದ್ದರು.