ಲಕ್ನೋ, ಮೇ 28 (DaijiworldNews/KH): ಉತ್ತರ ಪ್ರದೇಶದ ಯಮುನಾ ನದಿಯ ದಡದ ಬಳಿ ಅಂತ್ಯಕ್ರಿಯೆಯ ವೇಳೆ ವ್ಯಕ್ತಿಯೊಬ್ಬ ಸ್ನೇಹಿತನ ಚಿತಾಗಾರಕ್ಕೆ ಹಾರಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ಅಶೋಕ್ (42) ಎಂಬುವವರು ಕಳೆದ ಕೆಲ ಸಮಯದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ನಿನ್ನೆ ಮುಂಜಾನೆ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ. ಯಮುನಾ ನದಿಯ ದಡದಲ್ಲಿ ಅವರ ಅಂತ್ಯಕ್ರಿಯೆಯನ್ನು ನಡೆಸಲು ಸಿದ್ದತೆ ಮಾಡಿಕೊಂಡಿದ್ದಾರೆ.
ಅಶೋಕ್ ಅಂತ್ಯಕ್ರಿಯೆಗೆ ಕುಟುಂಬಸ್ಥರು ಹಾಗೂ ಅವರ ಸ್ನೇಹಿತ ಆನಂದ್ ಅವರು ಕೂಡ ಬಂದಿದ್ದಾರೆ. ಅಂತ್ಯಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಎಲ್ಲರೂ ವಾಪಾಸ್ ಆಗಿದ್ದಾರೆ. ಆದರೆ ಈ ವೇಳೆ ಆನಂದ್ ಇದ್ದಕ್ಕಿದ್ದಂತೆ ಅಂತ್ಯಕ್ರಿಯೆಯ ಚಿತಾಗಾರಕ್ಕೆ ಹಾರಿದ್ದಾರೆ.
ತಕ್ಷಣ ಅಲ್ಲಿಂದ ವಾಪಾಸ್ ಆಗುತ್ತಿದ್ದ ಜನ ಆನಂದ್ ಅವರನ್ನು ಚಿತಾಗಾರದ ಬೆಂಕಿಯಿಂದ ಕೂಡಲೇ ಎಳೆದು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ತೀವ್ರ ಸುಟ್ಟಗಾಯಗಳಿಂದ ಆನಂದ್ ಮೃತಪಟ್ಟಿದ್ದಾರೆ.
ಇನ್ನೂ ಈ ಘಟನೆಯ ಬಳಿಕ ಆನಂದ್ ಅವರ ಕುಟುಂಬದವರನ್ನು ಸಂಪರ್ಕ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.