ಬೆಂಗಳೂರು, ಮೇ 25 (DaijiworldNews/SM): ನೂತನ ಸಂಸತ್ ಭವನದ ಕಟ್ಟಡ ಉದ್ಘಾಟನೆ ಕಾರ್ಯಕ್ರಮಕ್ಕೆ ನಾನು ಹಾಜರಾಗುತ್ತೇನೆ. ಅದು ಯಾರೊಬ್ಬರ ವೈಯಕ್ತಿಕ ವಿಷಯಕ್ಕೆ ಸಂಬಂಧಿಸಿದ್ದಲ್ಲ. ದೇಶದ ಆಸ್ತಿ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಕ್ಷದ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದ ದೇವೇಗೌಡರು ಸಂಸತ್ ಭವನ ಉದ್ಘಾಟನೆ ಯಾರ ವೈಯಕ್ತಿಕ ಕಾರ್ಯಕ್ರಮ ಅಲ್ಲ, ದೇಶದ ಕಾರ್ಯಕ್ರಮ ಎಂದಿದ್ದಾರೆ. ಆ ಭವ್ಯ ಕಟ್ಟಡ ದೇಶದ ಜನರ ತೆರಿಗೆ ಹಣದಿಂದ ನಿರ್ಮಾಣವಾಗಿದೆ. ಅದು ದೇಶಕ್ಕೆ ಸೇರಿದ್ದು. ಅದು ಬಿಜೆಪಿ ಅಥವಾ ಆರೆಸ್ಸೆಸ್ ಕಚೇರಿ ಅಲ್ಲ. ಸಂಸತ್ ಭವನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಓರ್ವ ಮಾಜಿ ಪ್ರಧಾನಮಂತ್ರಿಯಾಗಿ, ದೇಶದ ಪ್ರಜೆಯಾಗಿ ಭಾಗಿಯಾಗುತ್ತಿದ್ದೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿಯನ್ನು ರಾಜಕೀಯವಾಗಿ ವಿರೋಧಿಸಲು ಅನೇಕ ಕಾರಣಗಳಿವೆ. ಆದರೆ, ಸಂಸತ್ ಭವನ ಉದ್ಘಾಟನೆ ವಿಷಯದಲ್ಲಿ ರಾಜಕೀಯ ತರುವುದು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ವಿಚಾರ ಎಂದಿದ್ದಾರೆ. ನಾನು ಸಂಸತ್ತಿನ ಎರಡು ಸದನಗಳಿಗೆ ಆಯ್ಕೆಯಾಗಿದ್ದೇನೆ. ಅಲ್ಲಿ ಸಾಂವಿಧಾನಿಕ ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ, ಈಗಲೂ ಸದಸ್ಯನಾಗಿದ್ದೇನೆ. ಸಂವಿಧಾನದ ಮೌಲ್ಯಗಳನ್ನು ಕಾಪಾಡುವ ಕೆಲಸ ಮಾಡಿದ್ದೇನೆ. ಹೀಗಾಗಿ ಸಂವಿಧಾನದ ವಿಷಯದಲ್ಲಿ ನಾನು ರಾಜಕೀಯ ತರಲಾರೆ ಎಂದಿದ್ದಾರೆ.