ಬೆಂಗಳೂರು, ಮೇ 24(DaijiworldNews/MS): ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯುಟಿ ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾವನೆ ಮಾಡಿದರು. ಸಿಎಂ ಪ್ರಸ್ತಾವವನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅನುಮೋದಿಸಿದರು. ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಹಾಕದ ಹಿನ್ನೆಲೆಯಲ್ಲಿ 23ನೇ ಸ್ಪೀಕರ್ ಆಗಿ ಖಾದರ್ ಅವರನ್ನು ಅವಿರೋಧವಾಗಿ ಘೋಷಣೆ ಮಾಡಲಾಯಿತು.
ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯು.ಟಿ.ಖಾದರ್ಗೆ ಅಭಿನಂದನೆ ಸಲ್ಲಿಸಿ, ವಿಧಾನಸಭೆಯಲ್ಲಿ ಅತಿ ಹೆಚ್ಚು ಪ್ರಶ್ನೆ ಕೇಳಿದ್ದಕ್ಕೆ ಯು.ಟಿ.ಖಾದರ್ ಅವರಿಗೆ ಸದನವೀರ ಪ್ರಶಸ್ತಿಯೂ ಸಿಕ್ಕಿತ್ತು. ವಿಪಕ್ಷ ಉಪನಾಯಕರಾಗಿಯೂ ಯು.ಟಿ.ಖಾದರ್ ಉತ್ತಮ ಕೆಲಸ ಮಾಡಿದ್ದಾರೆ. ಧಾನಸಭೆ ಪ್ರಜಾಪ್ರಭುತ್ವದ ದೇಗುಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಪೀಕರ್ ಸ್ಥಾನ ಅತ್ಯುನ್ನತವಾದುದು ಯು.ಟಿ.ಖಾದರ್ ಅಧ್ಯಕ್ಷತೆಯಲ್ಲಿ ಸದನ ಮೇಲ್ಮಟ್ಟಕ್ಕೆ ಹೋಗಲಿ. ಖಾದರ್ ಬಹಳ ತಾಳ್ಮೆ ವ್ಯಕ್ತಿ, ಆ ತಾಳ್ಮೆಯನ್ನು ಕಳೆದುಕೊಳ್ಳಬೇಡಿ ಎಂದು ಹೇಳಿದರು.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ನೂತನ ಸ್ಪೀಕರ್ ಖಾದರ್ಗೆ ಅಭಿನಂದನೆ ತಿಳಿಸಿ , ನ್ಯಾಯಾಂಗಕ್ಕಿಂತ ಎತ್ತರವಾದದ್ದು ಸ್ಪೀಕರ್ ಸ್ಥಾನ. ಹಾಗಾಗಿ ನಿಷ್ಪಕ್ಷಪಾತವಾಗಿ ತಾವು ಸದನವನ್ನು ನಡೆಸಬೇಕು. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಶಕ್ತಿ ನಿಮ್ಮಲ್ಲಿದೆ ಎಂದು ಹೇಳಿದರು.
"ಕೋಮು ಸೌಹಾರ್ದತೆಗೆ ಮತ್ತೊಂದು ಹೆಸರು ಯು.ಟಿ.ಖಾದರ್. ಎಲ್ಲರಿಗೂ ನೀವು ನ್ಯಾಯ ಒದಗಿಸಿ. ನಾವು ತಪ್ಪು ಮಾಡಿದರೂ ಸ್ಪೀಕರ್ ತಿದ್ದಿ ನಡೆಸಲಿ. ಸಭಾಧ್ಯಕ್ಷರು ಎಲ್ಲರನ್ನೂ ಸಮಾನವಾಗಿ ನೋಡಿ" ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.