ಕೊಪ್ಪಳ, ಮೇ 24(DaijiworldNews/MS): 200 ಯೂನಿಟ್ ಉಚಿತ ಎಂದು ಗ್ಯಾರಂಟಿ ಎಂದು ಭರವಸೆ ನೀಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ನೀಡುವ ವೇಳೆ ಜನಸಾಮಾನ್ಯರು ಅಲ್ಲಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸುದ್ದಿಗಳು ಸಾಮಾನ್ಯ. ಆದರೆ ಕೆಲ ಜನರು ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಲೈನ್ಮ್ಯಾನ್ಗಳ ಜತೆ ಜಗಳಕ್ಕೆ ಇಳಿಯುತ್ತಿರುವುದು ಮುಂದುವರಿದು ಹಲ್ಲೆ ಮಾಡುವ ಸ್ಥಿತಿಗೂ ತಲುಪಿದ್ದಾರೆ.
ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ಭೂಪನೊಬ್ಬ ವಿದ್ಯುತ್ ಬಿಲ್ ವಸೂಲಿಗೆ ಬಂದ ಲೈನ್ಮ್ಯಾನ್ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ನಡೆದಿದೆ.
ಕಳೆದ ಆರು ತಿಂಗಳಿನಿಂದ ಚಂದ್ರಶೇಖರಯ್ಯ ಎಂಬಾತ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದು ಬಿಲ್ ವಸೂಲಾತಿಗೆಂದು ಲೈನ್ಮ್ಯಾನ್ ಮಂಜುನಾಥ್ ಎಂಬುವರು ತೆರಳಿದ್ದರು. ಈ ವೇಳೆ ಬಿಲ್ ಪಾವತಿಸುವಂತೆ ಚಂದ್ರಶೇಖರಯ್ಯ ಅವರನ್ನು ಕೇಳಿದರೆ, ಆತ ನಾನು ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್ ಕಟ್ಟುವುದಿಲ್ಲ. ವಿದ್ಯುತ್ ಉಚಿತ ಅಂತ ಹೇಳಿದ್ದಾರೆ ಎಂದು ವಾಗ್ವಾದಕ್ಕೆ ಇಳಿದು ಅವಾಚ್ಯ ಶಬ್ದಗಳಿಂದ ಮಂಜುನಾಥ್ರನ್ನು ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿ, ದುರ್ವರ್ತನೆ ತೋರಿದ ಘಟನೆ ನಡೆದಿದೆ.