ಬೆಂಗಳೂರು, ಮೇ 22 (DaijiworldNews/SM): ಕರ್ನಾಟಕದಲ್ಲಿ ಚುನಾವಣೆ ಮುಗಿದು ಸಿದ್ದರಾಮಯ್ಯ ನೇತೃತ್ವದಲ್ಲಿ ಹೊಸ ಸರ್ಕಾರ ರಚನೆಗೊಂಡಿದೆ. ಶನಿವಾರ 8 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ರಾಜ್ಯದಲ್ಲಿ ಪ್ರತಿ ಬಾರಿಯೂ ಹೊಸ ಸರ್ಕಾರ ರಚನೆಗೊಂಡಾಗ ಹಿಂದಿನ ಸರ್ಕಾರದ ಕಾಮಗಾರಿಗಳನ್ನು ತಡೆ ಹಿಡಿಯಲಾಗುತ್ತದೆ. ಅದರಂತೆ ಈ ಸರಕಾರ ಬಂದಾಗಲು ಹಳೆಯ ಸರಕಾರದ ಕಾಮಗಾರಿಗಳಿಗೆ ತಡೆ ಹಿಡಿಯಲು ಆದೇಶ ಹೊರಡಿಸಿದೆ.
ಸಚಿವರಾಗಿ ನಿಯೋಜನೆಗೊಂಡವರು ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪರಿಶೀಲನೆ ನಡೆಸಿ ಅತ್ಯಗತ್ಯ ಇರುವುದಕ್ಕೆ ಮಾತ್ರ ಒಪ್ಪಿಗೆ ನೀಡುತ್ತಾರೆ. ಪಕ್ಷಗಳು ಚುನಾವಣಾ ಪ್ರಣಾಳಿಕೆಯಲ್ಲಿ ಜನರಿಗೆ ಹಲವು ಭರವಸೆ ನೀಡಿರುತ್ತದೆ. ಅವುಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುತ್ತವೆ. ಅಲ್ಲದೇ ಹಿಂದಿನ ಸರ್ಕಾರದ ಅನಗತ್ಯ ಕಾಮಗಾರಿಗಳಿದ್ದರೆ ಅದನ್ನು ತಡೆಹಿಡಿಯಲಾಗುತ್ತದೆ. ಕರ್ನಾಟಕದಲ್ಲಿ ಇನ್ನೂ ಖಾತೆ ಹಂಚಿಕೆ ಆಗಿಲ್ಲ. ಹಣಕಾಸು ಖಾತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಯೇ ಇರುವ ನಿರೀಕ್ಷೆ ಇದೆ. ಆದ್ದರಿಂದ ಹಿಂದಿನ ಸರ್ಕಾರದ ಯೋಜನೆಗಳಿಗೆ ತಡೆ ನೀಡಲಾಗಿದೆ. ಹಿಂದಿನ ಸರ್ಕಾರ ಘೋಷಣೆ ಮಾಡಿದ್ದ ಯೋಜನೆಗಳಿಗೆ ಅನುದಾನವನ್ನು ಬಿಡುಗಡೆ ಮಾಡುವುದಿಲ್ಲ. ಹೊಸ ಸರ್ಕಾರ ರಚನೆಯಾದಾಗ ಅವರು ಹೊಸದಾಗಿ ಬಜೆಟ್ ಮಂಡನೆ ಮಾಡುತ್ತಾರೆ. ತಮ್ಮ ಪಕ್ಷದ ಚುನಾವಣಾ ಪ್ರಣಾಳಿಕೆಗೆ ಅನುಗುಣವಾಗಿ ಬಜೆಟ್ ತಯಾರಿ ನಡೆಯುತ್ತದೆ. ಜುಲೈನಲ್ಲಿ ಹೊಸ ಬಜೆಟ್ ಮಂಡನೆ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದಾರೆ.
ಮಾರ್ಚ್ 22ರ ಸೋಮವಾರ ಆರ್ಥಿಕ ಇಲಾಖೆಯ ಸರ್ಕಾರದ ಕಾರ್ಯದರ್ಶಿ (ಆ ಮತ್ತು ಸಂ) ಡಾ. ಏಕ್ರೂಪ್ ಕೌರ್ ಸುತ್ತೋಲೆಯೊಂದನ್ನು ಹೊರಡಿಸಿದ್ದಾರೆ. ಮಾನ್ಯ ಮುಖ್ಯಮಂತ್ರಿಗಳ ಟಿಪ್ಪಣಿ ಅನ್ವಯ ಈ ಸುತ್ತೋಲೆ ಪ್ರಕಟವಾಗಿದೆ.
ಸರ್ಕಾರದ ಎಲ್ಲಾ ಇಲಾಖೆಗಳು/ ನಿಗಮಗಳು/ ಮಂಡಳಿ/ ಪ್ರಾಧಿಕಾರಗಳ ಹಿಂದಿನ ಕಾಮಗಾರಿಗಳನ್ನು ತಡೆಹಿಡಿಯುವ ಬಗ್ಗೆ ಎಂಬ ವಿಚಾರವನ್ನು ಸುತ್ತೋಲೆ ಒಳಗೊಂಡಿದೆ. ಈ ಮೂಲಕ ಹಿಂದಿನ ಸರ್ಕಾರದ ಕಾಮಗಾರಿಗಳನ್ನು ತಡೆ ಹಿಡಿಯಲು ಸೂಚನೆ ನೀಡಲಾಗಿದೆ.