ಬೆಂಗಳೂರು, ಮೇ 22 (DaijiworldNews/HR): ನೂತನವಾಗಿ ಆಯ್ಕೆಗೊಂಡಿರುವ ಎಲ್ಲ ಶಾಸಕರಿಗೂ ವಿಧಾನಸಭೆಯಲ್ಲಿ ಪ್ರಮಾಣವಚನ ಬೋಧನೆ ಕಾರ್ಯಕ್ರಮದಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಿಂದುತ್ವ ಹಾಗೂ ಗೋಮಾತೆ ಹೆಸರಿನಲ್ಲಿ ಮತ್ತು ಡಿ ಕೆ ಶಿವಕುಮಾರ್ ಅವರ ಹೆಸರಿನಲ್ಲಿ ಶಾಸಕ ಬಸವರಾಜ ಶಿವಗಂಗ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸದನದ ಅತ್ಯಂತ ಹಿರಿಯ ಸದಸ್ಯರಾದ ಆರ್. ವಿ. ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಗಿದ್ದು, ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ, ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದವರೆಲ್ಲರೂ ಶಾಸಕರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇನ್ನು ಚನ್ನಗಿರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಾಸಕ ಬಸವರಾಜ್ ಶಿವಗಂಗಾ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸಿದ್ದು, ಇದಕ್ಕೆ ಸದನದಲ್ಲೇ ಆಕ್ಷೇಪ ಎದುರಾಯಿತು. ಕೂಡಲೇ ಮಧ್ಯ ಪ್ರವೇಶಿಸಿದ ಸ್ಪೀಕರ್ ಆರ್.ವಿ.ದೇಶಪಾಂಡೆ ಅವರು ದೇವರು ಅಥವಾ ಸಂವಿಧಾನದ ಹೆಸರಿನಲ್ಲಿ ಮಾತ್ರ ಪ್ರಮಾಣ ವಚನ ಸ್ವೀಕರಿಸಬೇಕು, ಬೇರೆ ಯಾವುದೇ ಹೆಸರಿನಲ್ಲಿ ಬೇಡ ಎಂದು ಸೂಚನೆ ನೀಡಿದರು.
ಸುಳ್ಯ ಶಾಸಕಿಯಾಗಿ ಬಿಜೆಪಿಯ ಭಾಗೀರಥೀ ಮುರುಳ್ಯ ಅವರು ಕುಲದೇವರು ಸತ್ಯಸಾರಮಣಿ, ಸತ್ಯಪದನಾದಿ ಅಮ್ಮನವರು ಹಾಗೂ ಮತದಾರರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.
ಇನ್ನು ಭಗವಂತನ ಹೆಸರಿನಲ್ಲಿ ಸಿದ್ದರಾಮಯ್ಯ ಹಾಗೂ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಡಿ.ಕೆ. ಶಿವಕುಮಾರ್ ಪ್ರಮಾಣ ಮಾಡಿದರು.