ಬೆಂಗಳೂರು, ಮೇ 21 (DaijiworldNews/SM): ಕರ್ನಾಟಕದ ನೂತನ ಉಪಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಅವರು 2024 ರ ಸಾರ್ವತ್ರಿಕ ಚುನಾವಣೆಗೆ ಈಗಿಂದೀಗಲೇ ಸಿದ್ದತೆ ನಡೆಸಲಾರಂಭಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಮತ್ತು ಕಟ್ಟುನಿಟ್ಟಿನಿಂದ ಕೆಲಸ ಮಾಡಲು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಕಾರ್ಯಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದ ಸದಸ್ಯರು ಶಿಸ್ತುಬದ್ಧವಾಗಿರಬೇಕು ಮತ್ತು ನಿರ್ಣಾಯಕ ಸಮಯದಲ್ಲಿ ಸರಿಯಾದ ವಿಷಯಗಳತ್ತ ಗಮನ ಹರಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಿಮ್ಮೆಲ್ಲರ ಮುಂದೆ ಒಂದು ವಿಷಯ ನಾನು ಒಪ್ಪಿಕೊಳ್ಳುತ್ತೇನೆ. ವಿಧಾನಸಭಾ ಚುನಾವಣೆಯಲ್ಲಿ ನಾವು ಗಳಿಸಿದ 135 ಸ್ಥಾನಗಳಿಂದ ನನಗೆ ಸಂತೋಷವಿಲ್ಲ" ಎಂದು ತುಂಬಿದ ಸಭೆಯಲ್ಲಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
"ನಮ್ಮ ಗಮನವು ಸರಿಯಾದ ಸ್ಥಳದಲ್ಲಿರಬೇಕು. ಅದು ಮುಂಬರುವ ಸಾರ್ವತ್ರಿಕ ಚುನಾವಣೆಗಳ ಮೇಲೆ. ಇನ್ನು ಮುಂದೆ ಪ್ರತಿ ಸಮೀಕ್ಷೆಯಲ್ಲೂ ಕಾಂಗ್ರೆಸ್ ಪಕ್ಷ ಉತ್ತಮ ಸಾಧನೆ ಮಾಡಬೇಕು, ನಾವೆಲ್ಲರೂ ಶ್ರಮಿಸಬೇಕಾಗಿದೆ. ಇದು ಕೇವಲ ಒಂದು ಆರಂಭ ಮತ್ತು ಕೇವಲ ಒಂದು ಗೆಲುವಿನಿಂದ ಸೋಮಾರಿಯಾಗಬೇಡಿ' ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.