ಬೆಂಗಳೂರು, ಮೇ 20 (DaijiworldNews/MS): ನೂತನ ಸಿಎಂ ಆಗಿ ಆಯ್ಕೆಯಾಗಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಕೈಗೊಂಬೆ, ರಬ್ಬರ್ ಸ್ಟ್ಯಾಂಪ್ ಸಿಎಂ ಎನ್ನಲು ಈ ಪತ್ರವೇ ಸಾಕ್ಷಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಇಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು 2 ನೇ ಬಾರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಮೊದಲ ಬಾರಿಗೆ ಉಪ ಮುಖ್ಯಮಂತ್ರಿಯಾಗಿ , 8 ಮಂದಿ ಶಾಸಕರು ಸಚಿವರಾಗಿ ಇಂದು ಮಧ್ಯಾಹ್ನ 12.30 ಕ್ಕೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಆರಂಭದಲ್ಲಿ 25 ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಾರೆ ಎಂದು ನಿರ್ಧರಿಸಲಾಗಿತ್ತದ್ದರೂ, ಶುಕ್ರವಾರ ದೆಹಲಿಯಲ್ಲಿ ತಡರಾತ್ರಿವರೆಗೂ ವೇಣುಗೋಪಾಲ್ ಮನೆಯಲ್ಲಿ ಚರ್ಚೆ ನಡೆದರೂ ಸಚಿವ ಪಟ್ಟಿ ಇನ್ನೂ ಅಂತಿಮ ಆಗಿಲ್ಲ. ಎಂಟು ಜನ ಸಚಿವರು ಅಂತಿಮ ಎನ್ನಲಾದ ಪಟ್ಟಿಯೊಂದು ಹೊರಬಿದ್ದಿದೆ. ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದು , ಕರ್ನಾಟಕದ ಕಾಂಗ್ರೆಸ್ ಸರಕಾರದ ಸಚಿವ ಸಂಪುಟದಲ್ಲಿ ಯಾರು ಮಂತ್ರಿಗಳಾಗಿರಬೇಕು ಎಂದು ನಿರ್ಧರಿಸುವ ಸ್ವಾತಂತ್ರ್ಯ ಕೂಡ ಸಿದ್ದರಾಮಯ್ ಅವರಿಗೆ ಇಲ್ಲ ಎನ್ನುವುದಕ್ಕೆ ಈ ಪತ್ರವೇ ಸಾಕ್ಷಿ. ಸಮಾಜವಾದಿ ತತ್ವದ ಸಿಎಂ ಸಿದ್ಧರಾಮಯ್ಯನವರು ಮೊದಲ ದಿನವೇ ತಾವು ಕಾಂಗ್ರೆಸ್ ಹೈಕಮಾಂಡಿನ ಕೈಗೊಂಬೆಯಾಗಿದ್ದು, ರಬ್ಬರ್ ಸ್ಟ್ಯಾಂಪ್ ಸಿಎಂ ಆಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.