ಬೆಂಗಳೂರು, ಮೇ 20 (DaijiworldNews/MS): ಇಂದು ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆ-2023 ಪರೀಕ್ಷೆಗೆ ಹಾಜರಾಗುವ ಯಾವುದೇ ವಿದ್ಯಾರ್ಥಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, 'ಕಂಠೀರವ ಕ್ರೀಡಾಂಗಣದ ಸುತ್ತಮುತ್ತಲಿನ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆಗೆ ಹಾಜರಾಗುವ ಯಾವುದೇ ವಿದ್ಯಾರ್ಥಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಅಭ್ಯರ್ಥಿಗಳು ಬೆಳಿಗ್ಗೆ 9:30 ರ ಮೊದಲು ಪರೀಕ್ಷಾ ಕೇಂದ್ರವನ್ನು ತಲುಪಲು ಮತ್ತು ಯಾವುದೇ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಲು ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.
ಇನ್ನು ಈ ಕುರಿತು ಡಿಕೆ ಶಿವಕುಮಾರು ಅವರು ಟ್ವೀಟ್ ಮಾಡಿದ್ದು ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇರುವ ಕಾರಣ ಸುತ್ತಮುತ್ತಲಿನ ಸಿಇಟಿ ಪರೀಕ್ಷಾ ಕೇಂದ್ರ ತಲುಪಬೇಕಿರುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಸಂಬಂಧ ಶಿಕ್ಷಣ ಇಲಾಖೆ ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ. ಆಯ್ದ ಕೇಂದ್ರಗಳಲ್ಲಿ ಮಧ್ಯಾಹ್ನ ಪರೀಕ್ಷೆ ಬರೆಯುವವರಿಗೆ ಊಟದ ವ್ಯವಸ್ಥೆ ಮಾಡುವಂತೆ ವ್ಯವಸ್ಥಾಪಕ ಮಂಡಳಿಗೆ ತಿಳಿಸಲಾಗಿದೆ" ಎಂದು ಹೇಳಿದ್ದಾರೆ.