ಬೆಂಗಳೂರು, ಮೇ 19 (DaijiworldNews/HR): ಕಾಂಗ್ರೆಸ್ ಪಕ್ಷ ನೀಡಿರುವ ಐದು ಗ್ಯಾರಂಟಿ ಯೋಜನೆಗಳನ್ನು ಈಡೇರಿಸುತ್ತೇವೆ ಎಂದು ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದ ಎಲ್ಲಾ ಜನತೆಗೆ, ನಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ನೀವು ಬಯಸಿದ ಸರ್ಕಾರ. ಜನರ ಧ್ವನಿ ರಾಜ್ಯ ಸರ್ಕಾರದ ಧ್ವನಿಯಾಗಲಿದೆ ಎಂದರು.
ಇನ್ನು ಮೊದಲ ಸಚಿವ ಸಂಪುಟದಲ್ಲಿ ನಮ್ಮ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ, ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ. ಈ ಸರ್ಕಾರ ನಾಳೆ ರಚನೆ ಆಗುತ್ತಿದ್ದು, ಈ ಕಾರ್ಯಕ್ರಮಕ್ಕೆ ನಮ್ಮ ಎಲ್ಲಾ ನಾಯಕರು ಆಗಮಿಸುತ್ತಿದ್ದಾರೆ. ರಾಷ್ಟ್ರದ ಅನೇಕ ನಾಯಕರಿಗೆ ಆಹ್ವಾನ ನೀಡಲಾಗಿದೆ ಎಂದಿದ್ದಾರೆ.
ರಾಜ್ಯದ ಎಲ್ಲಾ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮಾಧ್ಯಮಗಳ ಮೂಲಕ ಆಹ್ವಾನ ನೀಡುತ್ತಿದ್ದೇನೆ. ಈ ಕಾರ್ಯಕ್ರಮಕ್ಕೆ ಆಗಮಿಸುವರು 11 ಗಂಟೆ ಒಳಗಾಗಿ ಆಗಮಿಸಬೇಕು ಎಂದು ತಿಳಿಸಿದ್ದಾರೆ.