ನವದೆಹಲಿ, ಮೇ 18 (DaijiworldNews/SM): ಪ್ರಧಾನಿ ನರೇಂದ್ರ ಮೋದಿ ಅವರು ಮೇ 19 ರಿಂದ 21ರವರೆಗೆ ಜಪಾನ್ನ ಅಧ್ಯಕ್ಷತೆಯಲ್ಲಿ ನಡೆಯಲಿರುವ ಜಿ-7 ಶೃಂಗಸಭೆಗಾಗಿ ಹಿರೋಷಿಮಾಕ್ಕೆ ಭೇಟಿ ನೀಡಲು ಸಿದ್ಧರಾಗಿದ್ದಾರೆ.
1974 ರಲ್ಲಿ ನಡೆಸಿದ ಪೋಖ್ರಾನ್ ಪರಮಾಣು ಪರೀಕ್ಷೆಯ ನಂತರ ಭಾರತದ ಪ್ರಧಾನಿಯೊಬ್ಬರು ಹಿರೋಷಿಮಾಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ. 1945 ರಲ್ಲಿ ಪರಮಾಣು ಬಾಂಬ್ನಿಂದ ನಾಶವಾದ ಹಿರೋಷಿಮಾ ನಗರಕ್ಕೆ ಭೇಟಿ ನೀಡಿದ ಕೊನೆಯ ಭಾರತೀಯ ಪ್ರಧಾನಿ ಜವಾಹರಲಾಲ್ ನೆಹರು. ಇದೀಗ ಅವರ ನಂತರ ಅಲ್ಲಿಗೆ ಭೇಟಿ ನೀಡುತ್ತಿರುವ ಪ್ರಧಾನಿಯಾಗಿದ್ದಾರೆ ಮೋದಿ.
ಶಾಂತಿ, ಸ್ಥಿರತೆ ಮತ್ತು ಸುಸ್ಥಿರ ಸಮೃದ್ಧಿ, ಆಹಾರ, ರಸಗೊಬ್ಬರ ಮತ್ತು ಇಂಧನ ಭದ್ರತೆ, ಆರೋಗ್ಯ, ಲಿಂಗ ಸಮಾನತೆ, ಹವಾಮಾನ ಬದಲಾವಣೆ, ಪರಿಸರ, ಮೂಲಸೌಕರ್ಯ ಮತ್ತು ಅಭಿವೃದ್ಧಿ ಸಹಕಾರದಂತಹ ವಿಷಯಗಳ ಕುರಿತು ಪಾಲುದಾರ ರಾಷ್ಟ್ರಗಳೊಂದಿಗೆ ಜಿ-7 ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.
ಪ್ರಧಾನಿ ಮೋದಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಪ್ರಧಾನಿ ಅವರು ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿದಾ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ. ಅವರು ಹಿರೋಷಿಮಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅನಾವರಣಗೊಳಿಸಲು ನಿರ್ಧರಿಸಿದ್ದಾರೆ. ನಾವು ಹಿರೋಷಿಮಾದಲ್ಲಿ ಕ್ವಾಡ್ ನಾಯಕರ ಸಭೆಯನ್ನು ಯೋಜಿಸುತ್ತಿದ್ದೇವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ್ ಕ್ವಾತ್ರಾ ಪ್ರಧಾನಿ ಮೋದಿ ಅವರ ಜಪಾನ್ ಭೇಟಿಯ ಕುರಿತು ವಿವರಿಸಿದ್ದಾರೆ.