ನವದೆಹಲಿ, ಮೇ 18 (DaijiworldNews/MS): "ನಾವು ಹೈಕಮಾಂಡ್ ನಿರ್ಧಾರದಿಂದ ಸಂತೋಷವಾಗಿಲ್ಲ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹೋದರ, ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, "ರಾಜ್ಯದ ಹಾಗೂ ಪಕ್ಷದ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ. ನನ್ನ ಸಹೋದರ ಸಿಎಂ ಆಗಲು ಬಯಸಿದ್ದು, ಆದರೆ ಅದು ಈಗ ಸಾಧ್ಯವಾಗಿಲ್ಲ. ಹೀಗಾಗಿ, ಹೈಕಮಾಂಡ್ ನಿರ್ಧಾರದಿಂದ ನಾವು ಖುಷಿಯಾಗಿಲ್ಲ" ಎಂದು ಹೇಳಿದ್ದಾರೆ.
ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಪ್ರಶ್ನಿಸಿದಾಗ , "ಸರ್ಕಾರ ರಚನೆಗೆ ಸಂಬಂಧಸಿದಂತೆ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಯಾವ ರೀತಿ ಸಂದಾನವಾಗಿದೆ ಎನ್ನುವ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ" ಎಂದಿದ್ದಾರೆ.
ಹಲವು ದಿನಗಳ ಆಂತರಿಕ ರಾಜಕೀಯ ಬೆಳವಣಿಗೆ, ಸಿಎಂ ಪಟ್ಟಕಾಗಿ ಫೈಟ್ ನಂತರ ಇಂದು ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮತ್ತು ಡಿಕೆ ಶಿವಕುಮಾರ್ ಅವರನ್ನು ಉಪ ಮುಖ್ಯಮಂತ್ರಿ ಎಂದು ಘೋಷಿಸಲು ಕಾಂಗ್ರೆಸ್ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ. ಅವರು ಶನಿವಾರ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.