ಬೆಂಗಳೂರು, ಮೇ 17 (DaijiworldNews/MS): ವಿಧಾನಸಭೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದುಕೊಂಡಿದೆ. ಆದರೆ ಚುನಾವಣೆಗೂ ಮುನ್ನವೇ ಬಿಜೆಪಿ ವಿಧಾನ ಪರಿಷತ್ನಲ್ಲಿ ಬಹುಮತ ಕಳೆದುಕೊಂಡಿದೆ.
ಸದ್ಯ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ಪರಿಷತ್ನಲ್ಲಿ ಅತಂತ್ರ ಸ್ಥಿತಿ ಎದುರಾಗಿದೆ. ಬಹುಮತ ಹೊಂದಿದ್ದ ಬಿಜೆಪಿಯಲ್ಲಿ ಪುಟ್ಟಣ್ಣ, ಆಯನೂರು ಮಂಜುನಾಥ್, ಲಕ್ಷ್ಮಣ್ ಸವದಿ, ಆರ್ ಶಂಕರ್, ಬಾಬುರಾವ್ ಚಿಂಚನಸೂರ ರಾಜೀನಾಮೆಯಿಂದ ತನ್ನ ಸದಸ್ಯ ಬಲವನ್ನು 34ಕ್ಕೆ ಇಳಿಸಿಕೊಂಡಿದೆ. ತಾಂತ್ರಿಕವಾಗಿ ಕೇಸರಿ ಪಡೆ ಬಹುಮತ ಕಳೆದುಕೊಂಡಂತಾಗಿದೆ.
ವಿಶ್ವನಾಥ್ ಕಾಂಗ್ರೆಸ್ ಜೊತೆ ಇರುವುದರಿಂದ ಭಾರತೀಯ ಜನತಾ ಪಕ್ಷಕ್ಕೆ ಅಧಿಕೃತವಾಗಿ 33 ಸ್ಥಾನ ಮಾತ್ರ ಹೊಂದಿದೆ. ಕಾಂಗ್ರೆಸ್ 26, ಜೆಡಿಎಸ್ ಬಳಿ 8 ಸ್ಥಾನವಿದೆ. 75 ಸದಸ್ಯರ ಪರಿಷತ್ನಲ್ಲಿ ಬಹುಮತಕ್ಕೆ 38 ಸ್ಥಾನ ಬೇಕಿದೆ.