ಬೆಂಗಳೂರು,ಮಾ 29 (MSP): ಬೆಂಗಳೂರು ಸೆಂಟ್ರಲ್ ನಿಂದ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿರುವ ಪ್ರಕಾಶ್ ರಾಜ್ ಸದ್ದುಗದ್ದಲವಿಲ್ಲದೆ ಪ್ರಚಾರಕ್ಕೆ ಚುರುಕು ಮುಟ್ಟಿಸಿದ್ದಾರೆ. ತಳಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸುತ್ತಿರುವ ಪ್ರಕಾಶ್ ರೈ ಗೆದ್ದೇ ಗೆಲ್ಲಬೇಕು ಛಲ ತೊಟ್ಟಿದ್ದಾರೆ. ಪ್ರಸ್ತುತ ಬೆಂಗಳೂರು ಸೆಂಟ್ರಲ್ ಕ್ಷೇತ್ರವು ಬಿಜೆಪಿಯ ವಶದಲ್ಲಿದೆ. ಇಲ್ಲಿನ ಹಾಲಿ ಸಂಸದ ಪಿ.ಸಿ.ಮೋಹನ್ ಎರಡು ಬಾರಿ ಗೆದ್ದಿದ್ದು, ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ಧಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಪರಾಭವಗೊಂಡ ರಿಜ್ವಾನ್ ಅರ್ಷದ್ ಈ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಪ್ರತಿಷ್ಠೆ ಪಣಕ್ಕಿಟ್ಟಿದ್ದಾರೆ. ಇವರಿಬ್ಬರ ನಡುವೆ ಪ್ರಕಾಶ್ ರೈ ಅಖಾಡಕ್ಕೆ ಎಂಟ್ರಿ ನೀಡಿ ಕ್ಷೇತ್ರಕ್ಕೀಗ ತಾರಾ ಮೆರುಗು ಬಂದಿದೆ.
ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕಟುವಾಗಿ ಟೀಕಿಸುವ ಬಹುಭಾಷ ನಟ ಪ್ರಕಾಶ್ ರೈ ತಾವು ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದರು. ಅದರಂತೆ ಕಾಂಗ್ರೆಸ್ ಬೆಂಬಲದ ನಿರೀಕ್ಷೆಯಲ್ಲಿದ್ದ ನಟ ಪ್ರಕಾಶ್ ರಾಜ್ ಇದ್ದರು. ಅದರೆ ಕಾಂಗ್ರೆಸ್ ನಿಂದ ಸಿಕ್ಕ ’ನೋ ’ ಉತ್ತರ ಪ್ರಕಾಶ್ ರೈ ಅವರ ಕನಸಿಗೆ ತಣ್ಣೀರು ಎರಚಿದಂತಾಗಿತ್ತು.
ಇದೀಗ ಪ್ರಚಾರಕ್ಕೆ ಚುರುಕುಮುಟ್ಟಿಸಿರುವ ಪ್ರಕಾಶ್ “ಬನ್ನಿ ಬೂತ್ ನಾಯಕರಾಗಿ” ಅನ್ನೂ ಅಭಿಯಾನದ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ. ಈ 2 ನಿಮಿಷದ ವಿಡಿಯೋದಲ್ಲಿ ಪ್ರಕಾಶ್ ಜನರ ಬೆಂಬಲ ಕೋರಿದ್ದಾರೆ. ವಿಡಿಯೋದಲ್ಲಿ ಪ್ರಕಾಶ್ ರಾಜ್, ಇದೀಗ ದೇಶದಲ್ಲಿ ನಡೆಯುತ್ತಿರುವ ಚುನಾವಣೆ ಪ್ರಧಾನಮಂತ್ರಿಗಳ ಆಯ್ಕೆಗಾಗಿ ಅಲ್ಲ ಎಂಬುದು ನೆನಪಿರಲಿ. ನೀವು ಚುನಾವಣೆಯಲ್ಲಿ ಆಯ್ಕೆ ಮಾಡುವ 500 ಕ್ಕೂ ಹೆಚ್ಚು ಸಂಸದರು ನಂತರ ಪ್ರಧಾನಿಯನ್ನು ಅರಿಸುತ್ತಾರೆ.
ನಮ್ಮ ಹಿತಾಸಕ್ತಿಯನ್ನು ಕಾಪಾಡುವ ಒಳ್ಳೆಯ ಸಂಸದರನ್ನು ಆರಿಸಿ ಕಳಿಸೋಣ. ನಾವು ಆರಿಸುವ ಸಂಸದರುಗಳು ಕೂಡಿಕೊಂಡು ಪ್ರಧಾನಿಯನ್ನು ಆಯ್ಕೆ ಮಾಡುತ್ತಾರೆ. ಪ್ರಜೆಗಳಿಗಾಗಿ ದುಡಿಯುವ ಉತ್ತಮ, ಅರ್ಹ, ಪ್ರಾಮಾಣಿಕ ಸಂಸದನನ್ನು ಆರಿಸೋಣ ಎಂದು ಕರೆ ನೀಡಿ ಎಂದು ಪ್ರಕಾಶ್ ರಾಜ್ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಚುನಾವಣೆ ಪ್ರಜೆಯ ದನಿಯಾಗಲಿ BE MY BOOTH LEADER ಅಭಿಯಾನದ ಭಾಗವಾಗಿ ನಮ್ಮ ತಂಡದೊಂದಿಗೆ ಜೊತೆಗೂಡಿ ಬದಲಾವಣೆಯ ರುವಾರಿಗಳಾಗೋಣ ಎಂದು ಕರೆನೀಡಿದ್ದಾರೆ.