ಭೋಪಾಲ್,ಮೇ16(DaijiworldNews/KH):ಸಾಗರದ ಕೆಸ್ಲಿ ತಹಸಿಲ್ನ ಸಹಜ್ಪುರ ಗ್ರಾಮದ ನಿವಾಸಿಯಾಗಿರುವ ಮುಖೇಶ್ ಪಟೇಲ್ ಅನಾರೋಗ್ಯದಿಂದ ಬಳಲುತ್ತಿದ್ದ ತನ್ನ ಒಂದು ವರ್ಷದ ಮಗುವನ್ನು ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿಯ ಗಮನಕ್ಕೆ ತರಲೆಂದು ವೇದಿಕೆಯ ಬಳಿ ಎಸೆದಿರುವ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ವೃತ್ತಿಯಲ್ಲಿ ಕಾರ್ಮಿಕನಾಗಿರುವ ಮುಖೇಶ್ ಪಟೇಲ್ ಹಾಗೂ ನೇಹಾ ದಂಪತಿಗೆ ಒಂದು ವರ್ಷದ ಮಗುವಿದ್ದು,ಆ ಮಗು ಹೃದಯ ರಂಧ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದು,ಮಗುವಿನ ಚಿಕಿತ್ಸೆಗಾಗಿ ಕಷ್ಟಪಟ್ಟು 4 ಲಕ್ಷಕ್ಕೂ ಅಧಿಕ ಖರ್ಚುಗಳನ್ನು ಮಾಡಿರುವ ಕುಟುಂಬ ಮಗುವಿನ ಶಸ್ತ್ರಚಿಕಿತ್ಸೆಗಾಗಿ ನೆರವಿನ ನಿರೀಕ್ಷೆಯಲ್ಲಿ ಅಲೆದಾಡಿ ಸೋತು ಹೋಗಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇತ್ತೀಚೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ತನ್ನ ಮಗುವಿನೊಂದಿಗೆ ಮುಖೇಶ್ ಪಟೇಲ್ ದಂಪತಿಯೂ ತೆರಳಿದ್ದರು. ಮೊದಲು ಪೊಲೀಸರ ಬಳಿ ತಮಗೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಬೇಕೆಂದು ಹೇಳಿದ್ದಾರೆ. ಆದರೆ ಪೊಲೀಸರು ಇದಕ್ಕೆ ಒಪ್ಪಿಗೆ ನೀಡಿಲ್ಲ. ಮುಖೇಶ್ ತನ್ನ ಒಂದು ವರ್ಷದ ಮಗುವನ್ನು ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮುಖ್ಯಮಂತ್ರಿಯ ಗಮನಕ್ಕೆ ತರಲೆಂದು ವೇದಿಕೆಯ ಬಳಿ ಎಸೆದಿದ್ದು ಕೂಡಲೇ ಮಗುವನ್ನು ಅಧಿಕಾರಿಗಳು ಮೇಲೆತ್ತಿ ದಂಪತಿಗೆ ನೀಡಿದ್ದಾರೆ.
ಇನ್ನು ಅಧಿಕಾರಿಗಳು ಮಗುವಿನ ಹೃದಯದಲ್ಲಿ ರಂಧ್ರದ ಸಹಾಯಕ್ಕಾಗಿ ಬಂದಿದ್ದಾರೆ ಎಂದು ಮುಖ್ಯಮಂತ್ರಿಗೆ ಹೇಳಿದ್ದು, ಇದಕ್ಕೆ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಎಲ್ಲಾ ಸಹಾಯವನ್ನು ಮಾಡುವುದಾಗಿ ಭರವಸೆಯನ್ನು ಕೊಟ್ಟಿದ್ದಾರೆ. ಹಾಗೂ ಈ ಬಗ್ಗೆ ವಿಚಾರ ಪಡೆದುಕೊಂಡು ಸಿಎಂ ಕಚೇರಿಗೆ ತಿಳಿಸಿ ಎಂದಿದ್ದಾರೆ.