ಬೆಂಗಳೂರು, ಮೇ 16 (DaijiworldNews/SM): ಮುಖ್ಯಮಂತ್ರಿ ಸ್ಥಾನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಿಗಿಪಟ್ಟು ಹಿಡಿದಿರುವುದರಿಂದ ನೂತನ ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್ ಹೈಕಮಾಂಡ್ ಗೆ ತಲೆ ನೋವಾಗಿ ಪರಿಣಮಿಸಿದೆ. ವರಿಷ್ಠರ ಆಹ್ವಾನದ ಮೇರೆಗೆ ಸಿದ್ದರಾಮಯ್ಯ ತಮ್ಮ ಬೆಂಬಲಿಗರೊಂದಿಗೆ ದೆಹಲಿ ತಲುಪಿದ್ದು, ಇಂದು ರಾತ್ರಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೂಡಾ ದೆಹಲಿಗೆ ತೆರಳಬೇಕಿತ್ತು. ಸಂಜೆ 7-30ಕ್ಕೆ ಕೆಐಎಬಿಯಿಂದ ದೆಹಲಿಗೆ ತಲುಪಲು ಏರ್ ಇಂಡಿಯಾ ವಿಮಾನದ ಟಿಕೆಟ್ ಕೂಡಾ ಬುಕ್ ಆಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರ ಭೇಟಿ ರದ್ದಾಗಿದೆ. ಈ ಕುರಿತು ತಮ್ಮ ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರಿಗೆ ತಿಳಿಸಿದ ಡಿಕೆ ಶಿವಕುಮಾರ್, ನನ್ನ ಹೊಟ್ಟೆಯಲ್ಲಿ ಸಮಸ್ಯೆಯಾಗಿದೆ, ಸ್ವಲ್ಪ ವಿಶ್ರಾಂತಿ ಬೇಕು ಎಂದರು.