ಪಶ್ಚಿಮಬಂಗಾಳ,ಮೇ15(DaijiworldNews/KH):ಅನಾರೋಗ್ಯದಿಂದ ಸಾವನ್ನಪ್ಪಿದ ಮಗನ ಮೃತದೇಹವನ್ನು ಹಣವಿಲ್ಲದ ಕಾರಣ ಆಸ್ಪತ್ರೆಯಿಂದ ೨೦೦ ಕಿ.ಮೀ ದೂರ ಊರಿಗೆ ಬಸ್ಸಿನಲಿ ಬ್ಯಾಗ್ ನಲ್ಲೇ ತಂದಿರುವ ಹೃದಯ ವಿದ್ರಾವಕ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಬಂಗಾಳದ ಡಂಗಿಪಾರ ಗ್ರಾಮದ ನಿವಾಸಿ ವಲಸೆ ಕಾರ್ಮಿಕ ಅಸೀಂ ದೇವಶರ್ಮಾ ಅವರ ಅವಳಿ ಮಕ್ಕಳಿಗೆ ಗಂಭೀರ ಆರೋಗ್ಯ ಸಮಸ್ಯೆಯಿದ್ದ ಹಿನ್ನೆಲೆ ಕಲಿಯಾಗಂಜ್ ರಾಜ್ಯ ಜನರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು, ಆದರೆ ಅವಳಿ ಮಕ್ಕಳಲ್ಲಿ ಒಂದು ಮಗು ಚಿಕಿತ್ಸೆ ಫಲಿಸದೆ ಶನಿವಾರ ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಲು ಆ್ಯಂಬ್ಯುಲೆನ್ಸ್ ನೀಡುವಂತೆ ಆಸ್ಪತ್ರೆಯವರಲ್ಲಿ ಅಸೀಂ ದೇವಶರ್ಮಾ ಅವರು ಕೇಳಿಕೊಂಡಿದ್ದಾರೆ. ಆ್ಯಂಬ್ಯುಲೆನ್ಸ್ ಚಾಲಕ ಇದಕ್ಕೆ 8000 ರೂ. ಕೊಡುವಂತೆ ಕೇಳಿದ್ದಾನೆ. ಮೊದಲೇ ಕಷ್ಟಪಟ್ಟು ಆಸ್ಪತ್ರೆಯ ಬಿಲ್ ಪಾವತಿಸಿದ ಅಸೀಂ ದೇವಶರ್ಮಾ ಅವರಿಗೆ ಇದು ಸಾಧ್ಯವಿಲ್ಲವೆಂದು ತಿಳಿಸಿ ಬ್ಯಾಗ್ ವೊಂದರಲ್ಲಿ ತನ್ನ 5 ತಿಂಗಳ ಮಗುವಿನ ಮೃತದೇಹವನ್ನು ಹಾಕಿಕೊಂಡು ಬಂಗಾಳದ ಸಿಲಿಗುರಿಯಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ರಾಯಗಂಜ್ಗೆ ಖಾಸಗಿ ಬಸ್ ನಲ್ಲಿ ಸಾಗಿದ್ದಾರೆ. ಕಲಿಯಾಗಂಜ್ ತಲುಪಿದ ಬಳಿಕ ಅಲ್ಲಿಂದ ಆ್ಯಂಬ್ಯುಲೆನ್ಸ್ ವ್ಯವಸ್ಥೆಯೊಂದನ್ನು ಮಾಡಿಕೊಂಡು ಊರಿಗೆ ಬಂದು ಮಗನ ಅಂತ್ಯಕ್ರಿಯೆಯನ್ನು ನಡೆಸಿದ್ದಾರೆ.
“ನನ್ನ 5 ತಿಂಗಳ ಮಗ 6 ದಿನಗಳ ಚಿಕಿತ್ಸೆ ಬಳಿಕ ಮೃತಪಟ್ಟಿದ್ದಾನೆ. ಆತನ ಚಿಕಿತ್ಸೆಗೆ ನಾನು 16 ಸಾವಿರ ರೂ. ವ್ಯಯಿಸಿದ್ದೇನೆ. ನನ್ನ ಬಳಿ ಆ್ಯಂಬ್ಯುಲೆನ್ಸ್ ಗೆ ನೀಡಲು ಹಣವಿಲ್ಲ ಅದಕ್ಕಾಗಿ ನಾನು ಚೀಲದಲ್ಲಿ ಮಗನ ಮೃತದೇಹವನ್ನು ಹಾಕಿಕೊಂಡು ಬಂದೆ” ಎಂದು ದುಃಖದಲ್ಲಿ ಅಸೀಂ ದೇವಶರ್ಮಾ ಹೇಳಿದ್ದಾರೆ.