ಬೆಂಗಳೂರು, ಮೇ 14 (DaijiworldNews/MS): ಬಹುಮತ ಪಡೆದಿರುವ ಹಿನ್ನೆಲೆ ಕಾಂಗ್ರೆಸ್ನಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಇದೀಗ ಪ್ರಕ್ರಿಯೆ ಪ್ರಾರಂಭಗೊಂಡಿವೆ. ಅದರಂತೆ ಮುಂದಿನ ಮುಖ್ಯಮಂತ್ರಿಗಳು ಯಾರು ಆಗುತ್ತಾರೆ ಎನ್ನುವ ಚರ್ಚೆ ಜೋರಾಗುತ್ತಿದ್ದಂತೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಮೂವರು ವೀಕ್ಷಕರನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೇಮಕಗೊಳಿಸಿದ್ದಾರೆ.
ಕೇಂದ್ರದ ಮಾಜಿ ಗೃಹ ಸಚಿವ, ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್ಕುಮಾರ್ ಶಿಂಧೆ ಮತ್ತು ಪಕ್ಷದ ನಾಯಕರಾದ ಜಿತೇಂದ್ರ ಸಿಂಗ್ ಮತ್ತು ದೀಪಕ್ ಬಬಾರಿಯಾ ಅವರನ್ನು ಕರ್ನಾಟಕದಲ್ಲಿ ಸಿಎಲ್ಪಿ ನಾಯಕನ ಆಯ್ಕೆಗೆ ಮತ್ತು ಮುಖ್ಯಮಂತ್ರಿ ಆಯ್ಕೆಗೆ ವೀಕ್ಷಕರನ್ನಾಗಿ ನೇಮಿಸಿದ್ದಾರೆ.
ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆಲ್ಲುವ ಮೂಲಕ ಮ್ಯಾಜಿಕ್ ಸಂಖ್ಯೆಯನ್ನು ದಾಟಿ ಪ್ರಚಂಡ ಗೆಲುವು ಸಾಧಿಸಿದೆ. ಕಾಂಗ್ರೆಸ್ ಗೆಲುವು ಕಾಣುತ್ತಿದ್ದಂತೆ ಸಿಎಂ ಹುದ್ದೆ ಯಾರಿಗೆ ಎಂಬ ಕುತೂಹಲ ಶುರುವಾಗಿದೆ.