ಬೆಂಗಳೂರು, ಮೇ 14 (DaijiworldNews/MS): ಕರ್ನಾಟಕದಲ್ಲಿ ಕಾಂಗ್ರೆಸ್ ಕೊನೆಗೂ ಹಿಡಿದ ಗುರಿ ಸಾಧಿಸಿದೆ. ರಾಜ್ಯ ವಿಧಾನಸಭೆ ಚುನಾವಣೆ ಅಖಾಡದಲ್ಲಿ ಬಿಜೆಪಿಯನ್ನು ಮಖಾಡೆ ಮಲಗಿಸಿದೆ.
ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆ ಗೆದ್ದ ಶಾಸಕರು ನಾಯಕ ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸುತ್ತಿದ್ದಾರೆ.
ಇಂದು ಸಂಜೆ ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಈ ವೇಳೆ ಮುಖ್ಯಮಂತ್ರಿಯ ನಿರ್ಧಾರವಾಗಲಿದೆ. ಆ ಬಳಿಕ ಅಲ್ಲಿ ನಿರ್ಧಾರವಾಗುವ ಹೆಸರು ಹೈಕಮಾಂಡ್ ನಾಯಕರು ಚರ್ಚಿಸಿದ ಬಳಿಕ ಅಂತಿಮವಾಗುವ ಸಾಧ್ಯತೆಯಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಚುನಾವಣಾ ಪೂರ್ವದಲ್ಲೇ ಈ ಇಬ್ಬರ ನಡುವೆ ಮುಖ್ಯಮಂತ್ರಿ ಹುದ್ದೆಯ ಭಾರೀ ಪೈಪೋಟಿ ನಡೆದಿತ್ತು. ಆದರೆ ಚುನಾವಣೆ ಬೇಳೆ ಇಬ್ಬರೂ ಒಗ್ಗಟ್ಟು ಪ್ರದರ್ಶಿಸಿದ್ದರು. ಆದರೆ ಉಭಯ ನಾಯಕರು ತಾವೇ ಸಿಎಂ ಆಗಬೇಕು ಎಂಬ ಪಟ್ಟು ಹಿಡಿದಿದ್ದಾರೆ. ಶಾಸಕರ ಅಭಿಪ್ರಾಯದ ಮೇಲೆ ಹೈಕಮಾಂಡ್ ಸಿಎಂ ಆಯ್ಕೆ ಮಾಡುವುದು ಪ್ರಕ್ರಿಯೆಯಾದರೂ ಸದ್ಯ ಹೇಳುವಷ್ಟು ಇದು ಸರಳವಾಗಿ ನಡೆಯುವ ಸಾಧ್ಯತೆಯಿಲ್ಲ. ಹೀಗಾಗಿ ಯಾರು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಾರೆ ಎನ್ನುವುದೇ ಕುತೂಹಲವಾಗಿದೆ