ಬೆಂಗಳೂರು, ಮೇ 11 (DaijiworldNews/MS): ಮತದಾರರು ಮತಚಲಾವಣೆಯ ಮೂಲಕ ಕರ್ನಾಟಕದ ಭವಿಷ್ಯ ನಿರ್ಧಾರ ಮಾಡಿದ್ದಾರೆ. ಈವರೆಗೆ ಪ್ರಚಾರ ಭರಾಟೆಯಲ್ಲಿದ್ದ ಅಭ್ಯರ್ಥಿಗಳು ಮತದಾನ ಮುಗಿಯುತ್ತಿದ್ದಂತೆ ಒಂದು ಹಂತದ ನಿಟ್ಟುಸಿರು ಬಿಟ್ಟಿದ್ದರೂ, ಅವರ ಚಿಂತೆ, ಎದೆಬಡಿತ ಹೆಚ್ಚಿದೆ. ಯಾಕೆಂದರೆ ಅಭ್ಯರ್ಥಿಗಳು ಈಗ ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.
ಇನ್ನೊಂದೆಡೆ ಅಭ್ಯರ್ಥಿಗಳ ಪರ ಬಾಜಿದಾರರು ಸೋಲು-ಗೆಲುವಿನ ಲೆಕ್ಕಾಹಾಕುತ್ತಿದ್ದು, ಬೆಟ್ಟಿಂಗ್ ಸಮರ ಜೋರಾಗಿ ಸದ್ದು ಮಾಡುತ್ತಿದೆ. ರಾಜಧಾನಿ ಬೆಂಗಳೂರು ಸೇರಿ ಹಲವೆಡೆ ನಗರ ಪ್ರದೇಶದಲ್ಲಿ ಮತದಾನ ಕಡಿಮೆಯಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆದಿರುವುದರಿಂದ ತಮಗೆ ಲಾಭವಾಗಬಹುದು ಎಂಬುದು ಎಲ್ಲಾ ರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿದೆ.
ಮತದಾನ ಅಂತ್ಯಗೊಳ್ಳುತ್ತಿದ್ದಂತೆಯೇ ಈಗ ಬೂತ್ ಮಟ್ಟದಲ್ಲಿ ನಡೆದಿರುವ ಶೇಕಡವಾರು ಮತ ಚಲಾವಣೆ ಲೆಕ್ಕದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ತಾಳೆ ಹಾಕುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಮತದಾರನ್ನ ನೋಡಿ ತಮ್ಮ ಪಕ್ಷದ ಮತದಾರರೆಂದು ಗುರುತಿಸಿಕೊಂಡಿರುವ ರಾಜಕೀಯ ಪಕ್ಷಗಳಿಗೆ 70% ಲೆಕ್ಕ ಸಿಗುವುದು ಇಲ್ಲಿಂದ ಹೀಗಾಗಿ ಬೂತ್ ಮಟ್ಟದಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆಮತದಾರರ ಪಟ್ಟಿ ಹಿಡಿದು ಕುಳಿತಿದ್ದ ಪಕ್ಷದ ಕಾರ್ಯಕರ್ತರು ಕೊಡುವ ಲೆಕ್ಕದ ಮೇಲೆ ಅಭ್ಯರ್ಥಿಗಳು ತಮ್ಮ ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಾರೆ.