ಬಳ್ಳಾರಿ, ಮೇ 10 (DaijiworldNews/MS): ಮತದಾನ ಮಾಡಲು ಬಂದಿದ್ದ ತುಂಬು ಗರ್ಭಿಣಿಯೊಬ್ಬರು ಮತಗಟ್ಟೆ ಆವರಣದಲ್ಲೇ ಮಗುವಿಗೆ ಜನ್ಮನೀಡಿದ ಘಟನೆ ತಾಲೂಕಿನ ಬಳ್ಳಾರಿಯ ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊರ್ಲಗುಂದಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಮತಗಟ್ಟೆ ಸಂಖ್ಯೆ 228 ರಲ್ಲಿ ಈ ಘಟನೆ ನಡೆದಿದ್ದು, ೨೩ ವರ್ಷದ ತುಂಬು ಗರ್ಭಿಣಿ ಮಣಿಲಾ ಎನ್ನುವವರೇ ಮಗುವಿಗೆ ಜನ್ಮನೀಡಿದ ಮಹಿಳೆಯಾಗಿದ್ದಾಳೆ.
ಗರ್ಭಿಣಿ ಮಣಿಲಾ ಅವರು ಹಕ್ಕು ಚಲಾಯಿಸಲು ಮತಗಟ್ಟೆಗೆ ಬಂದಿದ್ದಾರೆ. ಈ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಪಕ್ಕದಲ್ಲೇ ಇದ್ದ ಕೊಠಡಿಗೆ ಕರೆದುಕೊಂಡು ಹೋಗಿ ಆರೈಕೆ ಮಾಡಲಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಹೆರಿಗೆಯಾದ ಬಳಿಕ ಸಮೀಪದ ಪ್ರಾಥಮಿಕ ಆರೋಗ್ಯಕ್ಕೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.