ಕೋಲ್ಕತ್ತಾ,ಮೇ9(DaijiworldNews/KH):ಸೆಕ್ಯೂರಿಟಿ ಗಾರ್ಡ್ ಆಗಿ ದುಡಿಯುತ್ತಿರುವ ೫೩ ವ್ಯಕ್ತಿಯೊಬ್ಬರು ನಿರಾಶ್ರಿತ ಮತ್ತು ಬಡ ಮಕ್ಕಳಿಗಾಗಿ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಸಾರ್ವಜನಿಕ ಗ್ರಂಥಾಲಯ ಸ್ಥಾಪಿಸಿ ಇತರರಿಗೆ ಮಾದರಿಯಾಗಿದ್ದಾರೆ.
ಕೋಲ್ಕತ್ತಾದ ಪಥರಪ್ರತಿಮಾ ಲಕ್ಷ್ಮೀಪುರ ಗ್ರಾಮದ ಖಾಸಗಿ ಸೆಕ್ಯೂರಿಟಿ ಗಾರ್ಡ್ ಸತ್ಯ ರಂಜನ್ ಡೊಲುಯಿ (53) ಅವರು ಸುಮಾರು ಹತ್ತು ವರ್ಷಗಳಿಂದ ಉತ್ತರ ಕೋಲ್ಕತ್ತಾದ ರಾಜ್ಬಲ್ಲವ್ಪಾರಾದಲ್ಲಿರುವ ಕೆಎಂಸಿಯ ಜಗತ್ ಮುಖರ್ಜಿ ಪಾರ್ಕ್ನಲ್ಲಿ ತಮ್ಮ ಸ್ವಂತ ವೆಚ್ಚದಲ್ಲಿ ನಿರಾಶ್ರಿತ ಮತ್ತು ಬಡ ಮಕ್ಕಳಿಗಾಗಿ ಸಾರ್ವಜನಿಕ ಗ್ರಂಥಾಲಯವನ್ನು ನಡೆಸುತ್ತಿದ್ದಾರೆ.
ಸೆಕ್ಯೂರಿಟಿ ಗಾರ್ಡ್ ಆಗಿ ದುಡಿಯುತ್ತಿರುವ ಸತ್ಯ ರಂಜನ್ 8,200 ರೂ.ಗಳ ಮಾಸಿಕ ವೇತನ ಸಿಗುತ್ತಿದ್ದು, ಇದರಲ್ಲೇ ಒಂದಷ್ಟು ಉಳಿತಾಯ ಮಾಡಿ ಗ್ರಂಥಾಲಯವನ್ನು ನಿರ್ವಹಿಸುತ್ತಿದ್ದಾರೆ. ಪುಸ್ತಕಗಳನ್ನು ಖರೀದಿಸುವುದು ಮಾತ್ರವಲ್ಲ, ಲೈಬ್ರರಿಗಾಗಿ ಫ್ಯಾನ್, ಲೈಟ್ಸ್ ಮತ್ತು ಪುಸ್ತಕ ಜೋಡಣೆಗೆ ರ್ಯಾಕ್ ಗಳನ್ನುಖರೀದಿಸಿದ್ದಾರೆ.
ಸತ್ಯ ರಂಜನ್ ಮನೆಯಲ್ಲಿದ್ದ ಆರ್ಥಿಕ ಅಡಚಣೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸುವಂತೆ ಮಾಡಿತ್ತು. 1989 ರಲ್ಲಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಅವರನ್ನು ಉದ್ಯೋಗ ಅರಸಿಕೊಂಡು ಕೋಲ್ಕತ್ತಾಗೆ ಬಂದಿದ್ದರು. 2010 ರಲ್ಲಿ 2,800 ರೂಪಾಯಿಗಳ ಮಾಸಿಕ ವೇತನದೊಂದಿಗೆ ಉದ್ಯಾನವನದ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡತೊಡಗಿದರು. ಅದೇ ಸ್ಥಳದಲ್ಲಿ 2011 ರಲ್ಲಿ ನಿಯತಕಾಲಿಕೆಗಳು ಮತ್ತು ದಿನಪತ್ರಿಕೆಗಳೊಂದಿಗೆ ಗ್ರಂಥಾಲಯ ಪ್ರಾರಂಭಿಸಿದರು.
"ಸ್ಥಳೀಯರ ಸಹಾಯದಿಂದ ನಾನು 2012 ರಲ್ಲಿ ನನ್ನ ಗ್ರಂಥಾಲಯಕ್ಕೆ ಪುಸ್ತಕ ದೇಣಿಗೆಗಾಗಿ ಪ್ರಚಾರವನ್ನು ಪ್ರಾರಂಭಿಸಿದೆ. ಪುಸ್ತಕಗಳ ಸಂಗ್ರಹ ಹೆಚ್ಚತೊಡಗಿದಂತೆ ಗ್ರಂಥಾಲಯದ ನಿರ್ವಹಣೆಗೆ ಖರ್ಚು ಹೆಚ್ಚಿದ್ದು, ಹೀಗಾಗಿ ನನ್ನ ವೇತನದ ಅರ್ಧ ಪಾಲು ಇದಕ್ಕಾಗಿಯೇ ಖರ್ಚು ಮಾಡಬೇಕಾಗುತ್ತದೆ. ಲೈಬ್ರರಿಯಲ್ಲಿರುವ ಪುಸ್ತಕಗಳ ಸಂಖ್ಯೆ ಹೆಚ್ಚಿರಬಹುದು, ಆದರೆ ಸಂಬಳ ಮಾತ್ರ ಹೆಚ್ಚಾಗಿಲ್ಲ" ಎನ್ನುತ್ತಾರೆ ಸತ್ಯರಂಜನ್
ಮಧ್ಯರಾತ್ರಿಯಲ್ಲಿ ಮಾದಕ ವ್ಯಸನಿಗಳು ಗ್ರಂಥಾಲಯಕ್ಕೆ ಬಂದು ಪುಸ್ತಕಗಳನ್ನು ಕದಿಯುವುದನ್ನು ತಡೆಯಲು ಟೈಗರ್ ಮತ್ತು ಸ್ಕೂಬಿ ಎಂಬ ಹೆಸರಿನ ಎರಡು ಶ್ವಾನಗಳನ್ನು ಸಾಕಿದ್ದಾರೆ. ತಮ್ಮ ಪುಟ್ಟ ಕುಟುಂಬವನ್ನು ಪೋಷಿಸಲು ಸತ್ಯ ರಂಜನ್ ಅವರು ಅರೆಕಾಲಿಕ ತೋಟಗಾರರಾಗಿಯೂ ಕೆಲಸ ಮಾಡುತ್ತಾರೆ. ಒಟ್ಟಾರೆ ಅವರು ಸ್ಥಾಪಿಸಿದ ಗ್ರಂಥಾಲಯದಲ್ಲಿ ಎಲ್ಲಾ ರೀತಿಯ ಪುಸ್ತಕಗಳನ್ನು ಸೇರಿ ಪುಸ್ತಕಗಳ ಸಂಖ್ಯೆ 10,000 ದಾಟಿದೆ.