ನವದೆಹಲಿ, ಮೇ 09 (DaijiworldNews/HR): ತಿಹಾರ್ ಜೈಲಿನಲ್ಲಿ ಗ್ಯಾಂಗ್ಸ್ಟರ್ ಟಿಲ್ಲು ತಾಜ್ಪುರಿಯಾನನ್ನು ಸಹಕೈದಿಗಳು ಇರಿದು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ವಿಶೇಷ ಪೊಲೀಸ್ ಪಡೆಯ ಏಳು ಸಿಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ನಡೆದ ವೇಳೆ ಈ ಏಳು ಮಂದಿ ಪೊಲೀಸ್ ಸಿಬಂದಿ ಜೈಲಿನ ಭದ್ರತೆಯ ಕರ್ತ ವ್ಯದಲ್ಲಿದ್ದು, ಅವರ ಕಣ್ಣೆದುರೇ ಟಿಲ್ಲು ತಾಜ್ಪುರಿಯಾನ ಮೇಲೆ ಸಹಕೈದಿಗಳು ಹಲ್ಲೆ ನಡೆಸುತ್ತಿದ್ದರೂ ಮೂಕಪ್ರೇಕ್ಷಕರಾಗಿದ್ದರು ಎಂಬ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅಮಾನತುಗೊಳಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಅಧಿಕಾರಿಗಳ ವಿರುದ್ಧ ದಿಲ್ಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಜೈಲಿನ ಆವರಣದಲ್ಲಿ ನಾಲ್ಕು ಚಾಕುಗಳು ಪತ್ತೆಯಾಗಿರುವ ಸಂಬಂಧ ಕಳವಳ ವ್ಯಕ್ತಪಡಿಸಿರುವ ನ್ಯಾಯಾಧೀಶರು ಜೈಲಿನ ಅವ್ಯವಸ್ಥೆಗಳ ಬಗೆಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.