ಬೆಂಗಳೂರು, ಮೇ 08 (DaijiworldNews/SM): ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೇರಡು ದಿನಗಳಷ್ಟೇ ಬಾಕಿ ಉಳಿದಿದ್ದು, ಬಹಿರಂಗ ಪ್ರಚಾರಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ.
ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸ್ಟಾರ್ ಪ್ರಚಾರಕರು ಹಾಗೂ ಆಯಾ ಕ್ಷೇತ್ರಗಳ ಮತಪಟ್ಟಿಯಲ್ಲಿ ಹೆಸರಿಲ್ಲದ ರಾಜಕೀಯ ನಾಯಕರುಗಳೂ ಸೇರಿದಂತೆ ಎಲ್ಲ ಮುಖಂಡರು ಕ್ಷೇತ್ರ ತೊರೆದಿದ್ದು, ಯಾವುದೇ ಅಭ್ಯರ್ಥಿ ಧ್ವನಿ ವರ್ಧಕಗಳನ್ನು ಬಳಸಿ, ಸಮಾವೇಶ, ರೋಡ್ ಶೋಗಳ ಮೂಲಕ ಮತಯಾಚಿಸುವಂತಿಲ್ಲ. ಆದರೆ, ಅಭ್ಯರ್ಥಿಗಳು ಮಾತ್ರ ಮನೆ ಮನೆಗೆ ತೆರಳಿ ಮಂಗಳವಾರ ಸಂಜೆ 6 ಗಂಟೆಯವರೆಗೂ ಮತ ಕೇಳಬಹುದು.
ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಇಂದು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಅಬ್ಬರದ ರೋಡ್ ಶೋ, ಪ್ರಚಾರ ಸಭೆಗಳ ಮೂಲಕ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿದರು. ಈ ಮೂಲಕ ಮತದಾರರನ್ನು ಓಲೈಸಿಕೊಳ್ಳಲು ಅಂತಿಮ ಕಸರತ್ತು ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪ್ರಚಾರ ನಿನ್ನೆಯೇ ಅಂತ್ಯಗೊಂಡಿತ್ತು. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ತವರು ಕ್ಷೇತ್ರ ಶಿಗ್ಗಾಂವಿ-ಸವಣೂರಿನ ವನಹಳ್ಳಿ, ಹನುಮನಹಳ್ಳಿ, ಹಿರೇಮಲ್ಲೂರು ಗ್ರಾಮಗಳಿಗೆ ಭೇಟಿ ನೀಡಿ, ಬಿರುಸಿನ ಪ್ರಚಾರ ನಡೆಸಿದರು.