ಚಿಕ್ಕಮಗಳೂರು,ಮೇ8(Daijiworld News/KH):ಚುನಾವಣೆಯ ಸಂದರ್ಭ 'ನನ್ನ ಪ್ರತಿಜ್ಞೆ - ನನ್ನ ಶಪಥ' ಎಂದು ಬಾಂಡ್ ಪೇಪರ್ ಮೇಲೆ ಬರೆದು ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈಎಸ್ವಿ ದತ್ತಾ ಶಪಥ ಮಾಡಿರುವ ಅಪರೂಪದ ವಿದ್ಯಾಮಾನ ನಡೆದಿದೆ. ಜೆಡಿಎಸ್ ಅಭ್ಯರ್ಥಿ ವೈಎಸ್ವಿ ದತ್ತಾ ಮಾಡಿರುವ ಶಪಥದಲ್ಲಿ ಪ್ರಮುಖ ಅಂಶಗಳು ಒಳಗೊಂಡಿದೆ.
ಶಪಥದಲ್ಲಿ ಏನಿದೆ :
ನಾನು ಕಡೂರು ಕ್ಷೇತ್ರದ ಜನರಿಗೆ ಎಂದು ಕಪ್ಪು ಚುಕ್ಕೆ ತರುವುದಿಲ್ಲ, ನಾನು ಕಡೂರು ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ, ಇದು ನನ್ನ ಸಂಕಲ್ಪ, ನಾನು ಪಾರದರ್ಶಕ, ಜನಸ್ನೇಹಿ ಆಡಳಿತ ಜೊತೆಗೆ ಯಾವುದೇ ಜಾತಿ ಬೇಧ ಭಾವ ಮಾಡುವುದಿಲ್ಲ, ನಾನು ಕ್ಷೇತ್ರದಲ್ಲಿ ಸಾಮರಸ್ಯ, ಜಾತೀಯತೆ, ಶಾಂತಿಯಿಂದ ನೆಲಸಲು ಕಟಿಬದ್ಧನಾಗಿದ್ದೇನೆ, ನಾನು ಬಿಡುಗಡೆ ಮಾಡಿರುವ ನನ್ನ ಮತ್ತು ಪಕ್ಷದ ಪ್ರಣಾಳಿಕೆಯಂತೆ 2023-ಹೊಸ ಕಡೂರು ನಿರ್ಮಾಣ ಮತ್ತು ಸಂಕಲ್ಪಕ್ಕೆ ಕಂಕಣ ಬದ್ಧವಾಗಿದ್ದೇನೆ, ನಾನು ರೈತರ ಕಷ್ಟಕ್ಕೆ ಸ್ಪಂದನೆ, ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲು, ರೈತರಿಗೆ ಉಚಿತ ಸಾಗುವಾಳಿ ಚೀಟಿ ನೀಡಲು ನಾನು ಬದ್ಧನಾಗಿದ್ದೇನೆ, ಕ್ಷೇತ್ರದ ಜನರ ಸಮಸ್ಯೆಗಳಿಗೆ ಹಗಳಿರುಳು, ಯಾವುದೇ ಜಾತಿ, ಬೇಧ, ಭಾವವಿಲ್ಲದೇ ದಿನದ 24 ಗಂಟೆ ಶ್ರಮಿಸಲು ಬದ್ಧನಾಗಿದ್ದೇನೆ. ಮೇಲೆ ನಾನು ಶಪಥ ಮಾಡಿದಂತೆ, ನಾನು ಶಾಸಕನಾಗಿ ಆಯ್ಕೆ ಆದರೆ, ನಾನು ಕಂಕಣ ಬದ್ಧನಾಗಿ, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತ, ಸಂವಿಧಾನ ಆಶಯದಂತೆ ಮೇಲೆ ಮಾಡಿರುವ ಶಪಥದಂತೆ ನಾನು ದೇವರ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ವೈಎಸ್ವಿ ದತ್ತಾ ಹೇಳಿದ್ದಾರೆ.