ಮಲಪ್ಪುರಂ, ಮೇ 08 (DaijiworldNews/HR): ಭಾನುವಾರ ಸಂಜೆ ಸುಮಾರು 30 ಪ್ರಯಾಣಿಕರಿದ್ದ ಹೌಸ್ ಬೋಟ್ ಪಲ್ಟಿಯಾಗಿ ಮುಳುಗಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 21 ಮಂದಿ ಸಾವನ್ನಪ್ಪಿರುವ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ತನೂರ್ ಪ್ರದೇಶದ ತುವಲ್ತಿರಾಮ್ ಬೀಚ್ ಬಳಿ ನಡೆದಿದೆ.
ಈ ಕುರಿತು ಪ್ರಾದೇಶಿಕ ಅಗ್ನಿಶಾಮಕ ದಳದ ಅಧಿಕಾರಿ ಶಿಜು ಕೆಕೆ ಮಾಹಿತಿ ನೀಡಿದ್ದು, ಇದುವರೆಗೆ ನಾವು 21 ಮೃತದೇಹಗಳನ್ನು ಹೊರತೆಗೆದಿದ್ದೇವೆ. ದೋಣಿಯಲ್ಲಿ ಎಷ್ಟು ಜನರು ಇದ್ದಾರೆ ಎಂಬುದು ನಮಗೆ ನಿಖರವಾಗಿ ತಿಳಿದಿಲ್ಲ. ಅದರಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ಕಂಡುಹಿಡಿಯಲು ನಾವು ಹುಡುಕಾಟವನ್ನು ಮುಂದುವರೆಸಿದ್ದೇವೆ ಎಂದರು.
ಇನ್ನು ಈ ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಅಗ್ನಿಶಾಮಕ ಮತ್ತು ಪೊಲೀಸ್ ಘಟಕಗಳು, ಕಂದಾಯ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳು ಮತ್ತು ಜಿಲ್ಲೆಯ ತಾನೂರ್ ಮತ್ತು ತಿರೂರು ಪ್ರದೇಶದ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.