ಶಿವಮೊಗ್ಗ,ಮೇ7(DaijiworldNews/KH):ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯ ಅಭಿವೃದ್ದಿಯ ಬದಲು ರಿವರ್ಸ್ ಗೇರ್ ನಲ್ಲಿ ಹೋಗುವುದು ಖಚಿತ, ಆದ್ದರಿಂದ ಜನರು ಕಾಂಗ್ರೆಸ್ ನವರಿಂದ ಎಚ್ಚರಿಕೆಯಿಂದ ಇರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಆಯನೂರಿನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿ ಮುದ್ರಾ ಯೋಜನೆಯಿಂದ ಯುವಕರಿಗೆ 20 ಲಕ್ಷ ಕೋಟಿ ರೂ. ನೆರವು ನೀಡಿದೆ. ಇದರ ಲಾಭ ಶಿವಮೊಗ್ಗದ ಸಾವಿರಾರು ಜನರಿಗೆ ಸಿಕ್ಕಿದೆ. ರಾಜ್ಯದಲ್ಲಿ ಬಿಜೆಪಿ ಮೂರೂವರೆ ವರ್ಷ ಅಧಿಕಾರ ಮಾಡಿದೆ. ಪ್ರತಿ ವರ್ಷ 13 ಲಕ್ಷಕ್ಕೂ ಹೆಚ್ಚು ಉದ್ಯೋಗ ನೀಡಿದೆ. ನಿಮ್ಮ ಪ್ರೀತಿಗೆ ಕರ್ನಾಟಕದ ಅಭಿವೃದ್ಧಿ ಮಾಡಿ ಬಡ್ಡಿ ಸಮೇತ ತೀರಿಸುತ್ತೇನೆ ಎಂದರು.
ಕರ್ನಾಟಕದಲ್ಲಿ ಈ ಬಾರಿ ಬಹುಮತದ ಬಿಜೆಪಿ ಎಂಬ ಮಂತ್ರ ಘೋಷಣೆ ಆಗುತ್ತಿದೆ. ಕೃಷಿಗೆ ಹೆಸರಾಗಿರುವ ಈ ನಾಡಲ್ಲಿ ಕೃಷಿ ಹಬ್ ಆಗಿ ಪರಿವರ್ತನೆ ಆಗಿದೆ. ಅಡಕೆ ಬೆಳೆಗಾರರ ಸಮಸ್ಯೆ ಬಗೆಹರಿಸುವ ಬದಲು ಕಡಿಮೆ ದರದ ಅಡಕೆ ಆಮದು ಮಾಡಿಕೊಳ್ಳಲು ಕಾಂಗ್ರೆಸ್ ನಿರ್ಧಾರ ಕಾಂಗ್ರೆಸ್ ಮಾಡಿತ್ತು. ಆದರೆ ನಾನು ಗುಜರಾತ್ ಸಿಎಂ ಆಗಿದ್ದಾಗ ಅಡಕೆ ಸಮಸ್ಯೆ ನಿವಾರಣೆ ಮಾಡಿದ್ದೆ. ಅಂದು ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ನನಗೆ ಮನವಿ ಮಾಡಿದ್ದರು. ನಮ್ಮ ಸರ್ಕಾರ ಕೃಷಿ ರಫ್ತಿಗೆ ಹೆಚ್ಚಿನ ಒತ್ತು ನೀಡಿದೆ. ಪರಿಣಾಮ ಜಗತ್ತಿನ ಟಾಪ್ 10 ಕೃಷಿ ರಫ್ತು ದೇಶದ ಪಟ್ಟಿಗೆ ಭಾರತ ಸೇರಿದೆ. ಕೊರೊನಾ ಕಾಲದಲ್ಲೂ ರಫ್ತು ಆಗಿತ್ತು ಎಂದರು.