ಭೋಪಾಲ್, ಮೇ7 (DaijiworldNews/KH): ಬಿಜೆಪಿ ಮುಖಂಡ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕೈಲಾಶ್ ಜೋಶಿಯವರ ಭಾವಚಿತ್ರವನ್ನು ಕೈಯಲ್ಲಿ ಹಿಡಿದು ಕೊಂಡು ಬಿಜೆಪಿಯ ಮಾಜಿಸಚಿವ ದೀಪಕ್ ಜೋಶಿ ಶನಿವಾರ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಆರು ತಿಂಗಳು ಮಾತ್ರ ಇದ್ದು, ಇದು ಬಿಜೆಪಿಗೆ ಬಹು ದೊಡ್ಡ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.
ಜೋಶಿ ಕಾಂಗ್ರೆಸ್ ಕಾರ್ಯಕರ್ತರಿಗೆ "ನಾನು ಜನಸಂಘದ ದೀಪಕ್" ಎಂದು ಪರಿಚಯಿಸಿಕೊಂಡರು. ವಿಧಾನ ಸಭಾ ಚುನಾವಣೆ 2018ರಲ್ಲಿ ಸೋಲು ಅನುಭವಿಸಿದ ಬಳಿಕ ಬಿಜೆಪಿ ತಮ್ಮನ್ನು ಹೇಗೆ ಕೆಟ್ಟದಾಗಿ ನಡೆಸಿಕೊಂಡಿತು ಎಂದು ಕಣ್ಣೀರು ಹಾಕುತ್ತಾ ವಿವರಿಸಿದರು. ನನ್ನ ಪತ್ನಿ ಕೋವಿಡ್ ನಿಂದ ತೀವ್ರ ಅಸ್ವಸ್ಥರಾಗಿದ್ದರು, ಆಕೆಯನ್ನು ಆಸ್ಪತ್ರೆಗೆ ಕರೆ ತರಲು ಸರ್ಕಾರ ಆಂಬುಲೆನ್ಸ್ ಕೂಡಾ ಕಳುಹಿಸಲಿಲ್ಲ ಹೀಗಾಗಿ ಅವಳು ಮೃತ ಪಟ್ಟಳು ಎಂದರು. ಮತ್ತೆ ನನ್ನ ತಂದೆ ಮೃತಪಟ್ಟಾಗ ಬಿಜೆಪಿಯ ಯಾವ ಮುಖಂಡರು ಸೌಜನ್ಯಕ್ಕೆ ಒಂದು ಕರೆ ಕೂಡಾ ಮಾಡಿಲ್ಲ, ಬದಲಾಗಿ ಕಾಂಗ್ರೆಸ್ ಸದಸ್ಯರು ವೈಯಕ್ತಿಕವಾಗಿ ಸಾಂತ್ವನ ಹೇಳಿದ್ದು ಮಾತ್ರವಲ್ಲದೇ, ಸ್ಮಾರಕಕ್ಕೆ ಭೂಮಿ ಕೂಡ ಕೊಟ್ಟರು ಎಂದು ಹೇಳಿದರು.
ಕಳೆದ ಎರಡು ವರ್ಷಗಳಲ್ಲಿ ಅನುಭವಿಸಿದ ನೋವಿನಿಂದ ಗಾಂಧಿ ನೆಹರೂ ಅವರ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಬಿಜೆಪಿ ಮುತ್ಸದ್ದಿಯಾಗಿದ್ದ ಜೋಶಿ ಜನಸಂಘದ ಸಂಸ್ಥಾಪಕ ಸದಸ್ಯರು ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದರು.