ಮೈಸೂರು, ಮೇ 06 (DaijiworldNews/HR): ಕರ್ನಾಟಕ ಬಿಜೆಪಿಯಿಂದಲೇ ಆಪರೇಷನ್ ಕಮಲ ಎಂಬುದು ಪರಿಚಯವಾದದ್ದು. ಶಾಸಕರಿಗೆ ಹಣ ಕೊಟ್ಟು ಖರೀದಿಸಿ, ಅವರಿಂದ ರಾಜೀನಾಮೆ ಕೊಡಿಸಿ ಉಪಚುನಾವಣೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಗೆಲ್ಲಿಸುವುದು ಆಪರೇಷನ್ ಕಮಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಪತ್ರಕರ್ತರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಜನ ಇಂದು ಬೇಸತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಅವರ ಭ್ರಷ್ಟಾಚಾರ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣನವರು ಪ್ರಧಾನಿಗಳಿಗೆ ಪತ್ರ ಬರೆದು, ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ 40% ಕಮಿಷನ್ ಸರ್ಕಾರ ಎಂದು ದೂರಿದ್ದಾರೆ ಎಂದರು.
ಇನ್ನು ಪಿಎಸ್ಐ ನೇಮಕಾತಿಯಲ್ಲಿ ಎಡಿಜಿಪಿ ಸಹಿತವಾಗಿ ಸುಮಾರು 70 ಜನ ಜೈಲಿಗೆ ಹೋದಗಿದ್ದು, ಇದು ಸಾಕ್ಷಿ ಅಲ್ಲವಾ? ಸಂತೋಷ್ ಪಾಟೀಲ್ ಎಂಬ ಬಿಜೆಪಿ ಕಾರ್ಯಕರ್ತ ಗ್ರಾಮೀಣಾಭಿವೃದ್ದಿ ಇಲಾಖೆಯಲ್ಲಿ ಗುತ್ತಿಗೆ ಕೆಲಸಗಳನ್ನು ಮಾಡಿ, ಲಂಚ ಕೊಡದ ಕಾರಣಕ್ಕೆ ಬಿಲ್ ಹಣ ನೀಡಲಿಲ್ಲ ಎಂದು ಉಡುಪಿಗೆ ಹೋಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದರು. ಇದು ಸಾಕ್ಷಿ ಅಲ್ಲವಾ? ನಾವು ಸದನದ ಒಳಗೆ ಮತ್ತು ಹೊರಗೆ ಹಗಲು ರಾತ್ರಿ ಹೋರಾಟವನ್ನು ಮಾಡಿದ್ದೆವು, ಧರಣಿ ಮಾಡಿದ್ದೆವು. ಇದರಿಂದ ಈಶ್ವರಪ್ಪ ರಾಜೀನಾಮೆ ನೀಡಬೇಕಾಯಿತು ಎಂದಿದ್ದಾರೆ.