ನವದೆಹಲಿ, ಮೇ 04 (DaijiworldNews/MS): ದೆಹಲಿಯಲ್ಲಿ ಸಾಕಷ್ಟು ದಿನಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಯುತ್ತಿದ್ದು, ಕುಸ್ತಿಪಟುಗಳು ಹಾಗೂ ಪೊಲೀಸರ ನಡುವೆ ಘರ್ಷಣೆ ಉಂಟಾಗಿದೆ. ಈ ಹಿನ್ನಲೆಯಲ್ಲಿ ಬಜರಂಗ್ ಪುನಿಯಾ ಅವರು ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಪೊಲೀಸರ ವಿರುದ್ದಕ್ರಮಕ್ಕೆ ಆಗ್ರಹಿಸಿ ಪೂನಿಯಾ ಪತ್ರ ಬರೆದಿದ್ದಾರೆ. ಪೊಲೀಸರು ಕುಸ್ತಿಪಟುಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಇದಲ್ಲದೇ ಕುಸ್ತಿಪಟು ವಿನೇಶ್ ಪೋಗಟ್ ಕೂಡಾ ಈ ಘರ್ಷಣೆಯ ಬಗ್ಗೆ ದೆಹಲಿ ಪೊಲೀಸ್ ಆಯುಕ್ತರಿಗೆ ಲಿಖಿತ ದೂರು ನೀಡಿದ್ದಾರೆ.
ಜಂತರ್ಮಂತರ್ನಲ್ಲಿ ಪ್ರತಿಭಟನಾನಿರತ ಕುಸ್ತಿಪಟುಗಳು ಮತ್ತು ಪೊಲೀಸ್ ಸಿಬ್ಬಂದಿ ಮಧ್ಯೆ ಕಳೆದ ರಾತ್ರಿ ಹೊಡೆದಾಟ ನಡೆದಿತ್ತು. ಇದರಿಂದ ಇಬ್ಬರು ಕುಸ್ತಿಪಟುಗಳ ತಲೆಗೆ ಗಂಭೀರ ಗಾಯವಾಗಿದೆ. ಪಾನಮತ್ತ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಆರೋಪಿಸಿದ್ದಾರೆ.
ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ವಿರೋಧಿಸಿ ಕುಸ್ತಿಪಟುಗಳು ಏ.23ರಿಂದ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.