ಹೈದ್ರಾಬಾದ್, ಮೇ 03 (DaijiworldNews/SM): ಹಿರಿಯ ನಟ ಹಾಗೂ ಅಮೃತವರ್ಷಿಣಿ ಖ್ಯಾತಿಯ ಶರತ್ ಬಾಬು ಅವರು ಅನಾರೋಗ್ಯದಿಂದ ಇದ್ದು, ಚಿಕಿತ್ಸೆ ಮುಂದುವರೆಸಲಾಗಿದೆ.
ಶರತ್ ಬಾಬು ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಹೈದರಾಬಾದ್ ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ವೆಂಟಿಲೇಟರ್ನಲ್ಲಿ ಇಡಲಾಗಿದೆ. ಇನ್ನು 71 ವರ್ಷದ ಶರತ್ ಬಾಬು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ.
ಈ ನಡುವೆ ಇತ್ತೀಚಿಗೆ ನಟ ಶರತ್ ಬಾಬು ದಿಢೀರ್ ಅಸ್ವಸ್ಥರಾಗಿದ್ದ ಹಿನ್ನೆಲೆ ಅವರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಆಸ್ಪತ್ರೆಯಿಂದ ಹೈದರಾಬಾದ್ನ ಆಸ್ಪತ್ರೆಗೆ ರವಾನಿಸಲಾಯಿತು.
ಶರತ್ ಬಾಬು ಅವರು 1951ರ ಜುಲೈ 31ರಂದು ಶ್ರೀಕಾಕುಳಂ ಜಿಲ್ಲೆಯ ಅಮುದಲಾದಲ್ಲಿ ಜನಿಸಿದರು. ತೆಲುಗು ಚಿತ್ರದ ಮೂಲಕ ಅವರು ಸಿನಿಮಾರಂಗಕ್ಕೆ ಪಾದರ್ಪಣೆ ನಡೆಸಿದ್ದರು. ಆ ಬಳಿಕ ಅವರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಕ್ಷೇತ್ರದತ್ತಲೂ ಒಲವು ತೋರಿದ್ದರು. ಇಲ್ಲಿಯ ತನಕ ಒಟ್ಟು 200ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.