ವಿಜಯಪುರ, ಮೇ 03 (DaijiworldNews/HR): ಗುತ್ತಿಗೆದಾರರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡರೂ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದು, ಶೇ.40 ರ ಭ್ರಷ್ಟ ಸರ್ಕಾರದ ಬಗ್ಗೆ ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ. ರೈತರ ಆತ್ಮಹತ್ಯೆ ಮೋದಿ ಅವರ ಕಣ್ಣಿಗೆ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಕರ್ನಾಟಕದಲ್ಲಿದ್ದ ಸರ್ಕಾರವೊಂದನ್ನು ಮೂರುವರೆ ವರ್ಷದ ಹಿಂದೆ ಶಾಸಕರ ಖರೀದಿ ಮೂಲಕ ಕೆಡವಿದ ಬಿಜೆಪಿ, ಶೇ.40 ಕಮೀಷನ್ ಸರ್ಕಾರ ರಚಿಸಿದ್ದು, ಗುತ್ತೇದಾರರು, ರೈತರು ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂಪ್ರಧಾನಿ ನರೇಂದ್ರ ಮೋದಿ ಅವರು ಮೌನಾಗಿ ಇರುವುದೇಕೆ. ಇದನ್ನು ಕರ್ನಾಟಕದ ಜನ ಪ್ರಶ್ನಿಸಬೇಕು ಎಂದಿದ್ದಾರೆ.
ಇನ್ನು ಕರ್ನಾಟಕದ ಜನ ನಿಮ್ಮ ನಾಡಿನ ಮೂಲ ಸಂಸ್ಕೃತಿ ಉಳಿಸಿಕೊಳ್ಳಲು, ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಚುನಾವಣೆ ಸಂದರ್ಭದಲ್ಲಿ ಅಭಿವೃದ್ಧಿ ಬದಲಿಗೆ ಧರ್ಮ, ಜಾತಿಗಳ ವಿಷಯದ ಚರ್ಚಿಸಿ ಭಾವನಾತ್ಮಕವಾಗಿ ನಿಮ್ಮನ್ನು ಮಾಧ್ಯಮಗಳ ಮೂಲಕ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಹೇಳಿದ್ದಾರೆ.