ಬೆಂಗಳೂರು, ಮೇ 03 (DaijiworldNews/MS): ಚುನಾವಣೆ ನಡುವೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ಪುತ್ರ, ಮಾಜಿ ಸಚಿವ ಕೆಪಿಸಿಸಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದ ಅಧ್ಯಕ್ಷ ಪ್ರಿಯಾಂಕ್ ಖರ್ಗೆಅವರ ಪತ್ನಿ ಮತ್ತು ಸಹೋದರ ಇಬ್ಬರೂ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದಾರೆ. ಒಂದೆಡೆ ಪಕ್ಷದ ಗೆಲುವಿಗಾಗಿ ಹಗಲಿರುಳು ದುಡಿಯುವ ಅನಿವಾರ್ಯತೆ. ಇನ್ನೊಂದೆಡೆ ಕೈ ಹಿಡಿದ ಪತ್ನಿ ಹಾಗೂ ಒಡ ಹುಟ್ಟಿದ ಸೋದರನಿಗೆ ತೀವ್ರವಾದ ಅನಾರೋಗ್ಯ ಸಮಸ್ಯೆಯ ಅಪಾರ ನೋವು ಪ್ರಿಯಾಂಕ್ ಖರ್ಗೆಗೆ ಕಾಡುತ್ತಿದೆ.
ಪತ್ನಿ ಶೃತಿ ಖರ್ಗೆಗೆ ಬ್ರೈನ್ ಟ್ಯೂಮರ್ ಪತ್ತೆಯಾಗಿ ಮುಂಬೈ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಸಹೋದರ ರಾಹುಲ್ ಖರ್ಗೆ ಕುತ್ತಿಗೆ ಕ್ಯಾನ್ಸರ್ನಿಂದ ಬಳಲುತ್ತಿದ್ದು ಆರೋಗ್ಯ ತೀರಾ ಕ್ಷೀಣಿಸಿದೆ. ಇದರಿಂದ ಖರ್ಗೆ ಕುಟುಂಬ ಈಗ ತೀವ್ರ ನೋವು ಅನುಭವಿಸುತ್ತಿದೆ.
ಪತ್ನಿಯ ಹಾಗೂ ಸಹೋದರನ ಆರೋಗ್ಯ ಮಾಹಿತಿಯನ್ನು ವೈದ್ಯರಿಂದ ಗಂಟೆ ಗಂಟೆಗೂ ಪಡೆಯುತ್ತಿರುವ ಪ್ರಿಯಾಂಕ್ ಖರ್ಗೆ ಅವರಿಬ್ಬರ ಆರೋಗ್ಯದ ಕಡೆಯೂ ಗಮನಿಸಿಕೊಂಡು, ನೋವು ನುಂಗಿಕೊಂಡೇ ನಿತ್ಯ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.