ನವದೆಹಲಿ, ಮೇ 2 (DaijiworldNews/KH):ತಿಹಾರ್ ಜೈಲಿನಲ್ಲಿ ಗ್ಯಾಂಗ್ವಾರ್ ನಡೆದಿದ್ದು,2021ರ ದೆಹಲಿಯ ರೋಹಿಣಿ ಕೋರ್ಟ್ ಶೂಟೌಟ್ ಆರೋಪಿ ಗ್ಯಾಂಗ್ಸ್ಟರ್ ಟಿಲ್ಲು ತಾಜ್ಪುರಿಯಾನನ್ನು ಹತ್ಯೆ ಮಾಡಲಾಗಿದೆ.
ಇದೇ ಜೈಲಿನಲ್ಲಿದ್ದ ವೈರಿ ಗ್ಯಾಂಗ್ನ ಗ್ಯಾಂಗ್ಸ್ಟರ್ಗಳಾದ ಯೋಗೇಶ್ ಟುಂಡಾ ಮತ್ತು ಇತರರು ಟಿಲ್ಲು ಮೇಲೆ ದಾಳಿ ಮಾಡಿ, ಕೊಲೆ ಮಾಡಿದ್ದಾರೆ. ತಿಹಾರ್ ಜೈಲಿನಲ್ಲಿ ಬಿಗಿ ಭದ್ರತೆಯ ನಡುವೆಯೂ ಇಂದು ಮುಂಜಾನೆ 6.45ರ ಹೊತ್ತಿಗೆ ಯೋಗೇಶ್ ಟುಂಡಾ ಮತ್ತು ಆತನ ನಾಲ್ವರು ಸಹಚರ ಖೈದಿಗಳು ಕಬ್ಬಿಣದ ರಾಡ್ನಲ್ಲಿ ಟಿಲ್ಲು ವನ್ನು ಥಳಿಸಿದ್ದರು.
ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು, ಆದರೆ ವೈದ್ಯರು ಆತ ಸಾವನ್ನಪ್ಪಿರುವುದಾಗಿ ಘೋಷಿಸಿದ್ದಾರೆ
ಶೂಟೌಟ್ ಪ್ರಕರಣದ ಆರೋಪಿ ಟಿಲ್ಲೂ ತೇಜ್ಪೂರಿಯಾ ಸೆಪ್ಟೆಂಬರ್ 24,2021ರಲ್ಲಿ ದೆಹಲಿಯ ರೋಹಿಣಿ ಕೋರ್ಟ್ನಲ್ಲಿ ನಡೆದ ಶೂಟೌಟ್ ಪ್ರಕರಣದ ಆರೋಪಿ. ಕೋರ್ಟ್ ಆವರಣದಲ್ಲಿ ನಡೆದಿದ್ದ ಶೂಟೌಟ್ನಲ್ಲಿ ಗ್ಯಾಂಗ್ ಸ್ಟಾರ್ ಜಿತೇಂದ್ರ ಗೋಗಿ ಮತ್ತು ಇತರ ಮೂವರು ಸಾವನ್ನಪ್ಪಿದ್ದರು. ಕೋರ್ಟ್ನ 206ನೇ ಸಂಖ್ಯೆ ಕೊಠಡಿಯಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲು ಜೀತೇಂದ್ರ ಗೋಗಿ ಕರೆದುಕೊಂಡು ಬರುವಾಗ ಶೂಟೌಟ್ ನಡೆದಿತ್ತು.
ವಕೀಲರ ಧಿರಿಸು ತೊಟ್ಟು ಬಂದಿದ್ದ ದಾಳಿಕೋರರು ಜಿತೇಂದ್ರ ಗೋಗಿ ಮತ್ತು ಇತರರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಸ್ಥಳದಲ್ಲಿಯೇ ಎಲ್ಲರೂ ಮೃತಪಟ್ಟಿದ್ದರು. ದೆಹಲಿ ವಿಶೇಷ ಘಟಕದ ಪೊಲೀಸರು ಗುಂಡಿನ ದಾಳಿ ನಡೆಸಿದ ಇಬ್ಬರನ್ನು ಹತ್ಯೆ ಮಾಡಿದ್ದರು. ಜಿತೇಂದ್ರ ಗೋಗಿ ಮತ್ತು ಟಿಲ್ಲೂ ಗ್ಯಾಂಗ್ ನಡುವೆ ಈ ಗುಂಡಿನ ದಾಳಿ ನಡೆದಿತ್ತು. ಈ ಪ್ರಕರಣ ಆರೋಪಿಗಳಾದ ಗೋಗಿ ಹಾಗೂ ಟಿಲ್ಲೂ ಗ್ಯಾಂಗ್ನ ಸದಸ್ಯರು ತಿಹಾರ್ ಜೈಲಿನಲ್ಲಿದ್ದರು.
2021ರಲ್ಲಿಯೇ ಟಿಲ್ಲೂ ತೇಜ್ಪೂರಿಯಾ ಹತ್ಯೆ ನಡೆಸಲು ಯೋಜನೆ ರೂಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿತ್ತು. ಜಿತೇಂದ್ರ ಗೋಗಿ ಹತ್ಯೆಯ ಬಳಿಕ ಎರಡು ಗ್ಯಾಂಗ್ಗಳ ನಡುವೆ ಪ್ರತಿದಾಳಿ ನಡೆಯಲಿದೆ ಎಂದು ಪೊಲೀಸರು ಅಂದಾಜಿಸಿದ್ದರು. ಆದ್ದರಿಂದ ಆರೋಪಿಗಳು ಇರುವ ಜೈಲಿನಲ್ಲಿಯೂ ಬಿಗಿ ಭದ್ರತೆ ಕೈಗೊಂಡಿದ್ದರು.
ದರೋಡೆಕೋರ ಜಿತೇಂದ್ರ ಗೋಗಿ ಮತ್ತು ಟಿಲ್ಲು ಉತ್ತಮ ಸ್ನೇಹಿತರಾಗಿದ್ದು, ಕಾಲೇಜು ಚುನಾವಣೆ ವೇಳೆ ಇಬ್ಬರ ನಡುವೆ ಘರ್ಷಣೆ ಏರ್ಪಟ್ಟಿತ್ತು. ಹೀಗಾಗಿ ಈ ಇಬ್ಬರು ಸ್ನೇಹಿತರು ಕಾಲೇಜು ದಿನಗಳಲ್ಲಿ ವಿರೋಧಿಗಳಾಗಿ ಬದಲಾಗಿದ್ದರು. ಕಾಲೇಜು ಬಿಟ್ಟ ಮೇಲೆ ಇಬ್ಬರೂ ಪಾತಕ ಲೋಕಕ್ಕೆ ಕಾಲಿಟ್ಟಿದ್ದರು.
ಇವರ ಇಬ್ಬರ ನಡುವಿನ ಗ್ಯಾಂಗ್ ವಾರ್ನಲ್ಲಿ ಎರಡೂ ಗ್ಯಾಂಗ್ಗಳ ಹತ್ತಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.