ನವದೆಹಲಿ, ಏ.27 (DaijiworldNews/SM): ನವದೆಹಲಿ: ಕಳೆದ ಏಪ್ರಿಲ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಸಂಗ್ರಹದಲ್ಲಿ ಶೇಕಡಾ 12 ರಷ್ಟು ಏರಿಕೆಯಾಗಿದ್ದು, ಒಟ್ಟು 1.87 ಲಕ್ಷ ಕೋಟಿ ರೂಪಾಯಿ ಜಿಎಸ್ ಟಿ ಸಂಗ್ರಹವಾಗಿದೆ. ಇದು ಇದುವರೆಗಿನ ಅತ್ಯಧಿಕ ಕಲೆಕ್ಷನ್ ಆಗಿದೆ.
ಕಳೆದ ಏಪ್ರಿಲ್ ನಲ್ಲಿ ಒಟ್ಟು ಜಿಎಸ್ ಟಿ ಆದಾಯ 1,87,035 ಕೋಟಿ ರೂ.ಸಂಗ್ರವಾಗಿದ್ದು, ಇದರಲ್ಲಿ ಸಿಜಿಎಸ್ ಟಿ 38,440 ಕೋಟಿ ರೂ., ಎಸ್ ಜಿಎಸ್ ಟಿ ರೂ. 47,412 ಕೋಟಿ, ಐಜಿಎಸ್ ಟಿ 89,158 ಕೋಟಿ ರೂ. 12,025 ಕೋಟಿ ಸೆಸ್ ಸಂಗ್ರಹವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಹಿಂದಿನ ವರ್ಷ ಏಪ್ರಿಲ್ನಲ್ಲಿ 1.68 ಲಕ್ಷ ಕೋಟಿ ರೂ. ಜಿಎಸ್ ಟಿ ಸಂಗ್ರಹವಾಗಿತ್ತು. ಏಪ್ರಿಲ್ 2023 ರ ಆದಾಯವು ಕಳೆದ ವರ್ಷದ ಏಪ್ರಿಲ್ ತಿಂಗಳ ಜಿಎಸ್ಟಿ ಆದಾಯಕ್ಕಿಂತ 12 ಶೇಕಡಾ ಹೆಚ್ಚಾಗಿದೆ" ಎಂದು ಸಚಿವಾಲಯ ಹೇಳಿದೆ.
ದೇಶಾದ್ಯಂತ ಸಂಗ್ರಹವಾಗಿರುವ ಒಟ್ಟು ಜಿಎಸ್ಟಿ ಕಲೆಕ್ಷನ್ ಪೈಕಿ ಕರ್ನಾಟಕದ ಪಾಲು ಗಮನಾರ್ಹವಾಗಿದೆ. ಕರ್ನಾಟಕದಲ್ಲಿ 14,593 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿದೆ.
ಮಹಾರಾಷ್ಟ್ರ ಬಿಟ್ಟರೆ ಕರ್ನಾಟಕದಲ್ಲೇ ಅತಿಹೆಚ್ಚು ಜಿಎಸ್ಟಿ ಸಂಗ್ರಹವಾಗಿದೆ. ಮಹಾರಾಷ್ಟ್ರದಲ್ಲಿ 33,196 ಕೋಟಿ ರೂ ಜಿಎಸ್ಟಿ ಸಂಗ್ರಹ ಆಗಿದೆ. ಗುಜರಾತ್, ತಮಿಳುನಾಡು, ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯಗಳು 10,000 ಕೋಟಿ ರೂಗೂ ಹೆಚ್ಚು ಮೊತ್ತದ ಜಿಎಸ್ಟಿ ಕಲೆಕ್ಷನ್ ಆಗಿದೆ.