ಬೀದರ್, ಏ 30 (DaijiworldNews/SM) : ಜಿಲ್ಲೆಯ ಔರಾದ ತಾಲೂಕಿನ ಹೆಡಗಾಪುರ್ ಗ್ರಾಮದಲ್ಲಿ ನದಿ ದಾಟುವ ವೇಳೆ ತುಂಬಿ ಹರಿಯುತ್ತಿದ್ದ ನದಿಯಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ರವಿವಾರ ಸಾಯಂಕಾಲ ನಡೆದಿದ್ದು, ರಕ್ಷಣಾ ತಂಡದಿಂದ ಶೋಧ ಕಾರ್ಯ ಮುಂದುವರೆದಿದೆ.
ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಅಕಾಲಿಕ ಮಳೆ ಆರ್ಭಟಿಸುತ್ತಿದ್ದು, ನಾಲಾ ಮತ್ತು ಸೇತುವೆಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಹೆಡಗಾಪುರ್- ಚಂದ್ರಾ ಮಹಾರಾಜ್ ಮಧ್ಯದ ಸೇತುವೆ ಸಹ ತುಂಬಿ ಹರಿಯುತ್ತಿದ್ದು, ಹೊಲದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ಒಂದೇ ಕುಟುಂಬದ ಮೂವರು ಕೊಚ್ಚಿ ಹೋಗಿರುವ ದಾರುಣ ಘಟನೆ ಸಂಭವಿಸಿದೆ. ಹೆಡಗಾಪುರ್ ಗ್ರಾಮದ ಸುನಂದಾ ಲದ್ದೆ (45), ಆಕೆಯ ಮಕ್ಕಳಾದ ಐಶ್ವರ್ಯ (16) ಮತ್ತು ಸುಮಿತ್ (10) ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ದುರ್ದೈವಿಗಳು ಎಂದು ತಿಳಿದು ಬಂದಿದೆ. ಈ ವೇಳೆ ಜೊತೆಯಲ್ಲಿದ್ದ ಸುನಂದಾ ಅವರ ಪತಿ ಸಂಗಪ್ಪ ಈಜಿಕೊಂಡು ದಡ ಸೇರಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ಮುಖಾಂ ಹೂಡಿರುವ ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿಗಳು, ಶೋಧ ಕಾರ್ಯ ಮುಂದುವರೆಸಿದ್ದಾರೆ. ಘಟನೆ ಕುರಿತು ಠಾಣಾಕುಶಮೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.