ಬೆಂಗಳೂರು, ಏ 29 (DaijiworldNews/MS): ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣಗಳ ಶೀಘ್ರ ವಿಚಾರಣೆ ಮತ್ತು ವಿಲೇವಾರಿಗೆ ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ 6 ತಿಂಗಳೊಳಗೆ ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಶಿಫಾರಸು ಮಾಡಿದೆ.
ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ನಡೆದ ಗಲಭೆ ಕೇಸ್ನ ತೀರ್ಪು ನೀಡುವ ವೇಳೆ ಈ ಶಿಫಾರಸು ಮಾಡಿದೆ. ಒಂದುವೇಳೆ ಈ ವಿಶೇಷ ಕೋರ್ಟ್ ಸ್ಥಾಪನೆಯಾಗದಿದ್ದರೆ ರಾಜ್ಯದ ಏಕೈಕ ನ್ಯಾಯಾಲಯದ ಮೇಲೆ ಒತ್ತಡ ಹೆಚ್ಚಲಿದ್ದು, ರಾಷ್ಟ್ರೀಯ ತನಿಖಾ ಸಂಸ್ಥೆ ಪ್ರಕರಣಗಳ ವಿಲೇವಾರಿ ವಿಳಂಬವಾಗಲಿದೆ ಎಂದು ಕೋರ್ಟ್ ತಿಳಿಸಿದೆ.
ಹುಬ್ಬಳ್ಳಿ ಗಲಭೆ ಕೇಸ್ನಲ್ಲಿ ಜಾಮೀನು ನಿರಾಕರಿಸಿದ್ದ ಎನ್ಐಎ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ಟಿ ವೆಂಕಟೇಶ್ ನಾಯಕ್ ನೇತೃತ್ವದ ನ್ಯಾಯಪೀಠ, ಎನ್ಐಎ ಪ್ರಕರಣಗಳ ವಿಚಾರಣೆಗೆ 6 ತಿಂಗಳ ಮೂರು ವಿಶೇಷ ನ್ಯಾಯಾಲಯ ಸ್ಥಾಪಿಸುವಂತೆ ಆದೇಶಿಸಿದೆ. ಅಲ್ಲದೇ, ಎನ್ಐಎ ವಿಶೇಷ ನ್ಯಾಯಾಲಯದ ಜಾಮೀನು ನಿರಾಕರಣೆ ಆದೇಶವನ್ನು ಎತ್ತಿಹಿಡಿದಿದೆ.