ನವದೆಹಲಿ, ಏ 27 (DaijiworldNews/MS): ಎರಡು ವರ್ಷ ಜೈಲು ಶಿಕ್ಷೆ ವಿಧಿಸಿರುವ ಸೂರತ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಮೇಲ್ಮನವಿ ಅರ್ಜಿ ವಿಚಾರಣೆಯಿಂದ ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿ ಹಿಂದೆ ಸರಿದಿದ್ದಾರೆ.
ಮೋದಿ ಉಪನಾಮ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ದೋಷಿ ಎಂದು ಪರಿಗಣಿತರಾಗಿ ಎರಡು ವರ್ಷ ಜೈಲು ಶಿಕ್ಷೆಯನ್ನು ಸೂರತ್ ನ್ಯಾಯಾಲಯ ವಿಧಿಸಿತ್ತು.
ರಾಹುಲ್ ಸಲ್ಲಿಸದ್ದ ಮೇಲ್ಮನವಿ ಕೇಸ್ ವಿಚಾರಣೆಗೆ ನಿಯೋಜಿತರಾಗಿದ್ದ ನ್ಯಾಯಮೂರ್ತಿ ಗೀತಾ ಗೋಪಿ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ನ್ಯಾಯಮೂರ್ತಿ ಗೀತಾ ಗೋಪಿ ಅವರು ಈ ಪ್ರಕರಣವನ್ನು ಬೇರೆ ನ್ಯಾಯಪೀಠಕ್ಕೆ ವಹಿಸುವಂತೆ ಮುಖ್ಯ ನ್ಯಾಯಮೂರ್ತಿಗೆ ವರ್ಗಾವಣೆ ಮಾಡುವಂತೆ ರಿಜಿಸ್ಟ್ರಿಗೆ ಸೂಚನೆ ನೀಡಿದ್ದಾರೆ ಎಂದು ವರದಿಯಾಗಿದೆ. ಹೊಸ ನ್ಯಾಯಮೂರ್ತಿಯ ನಿಯೋಜನೆ ಎರಡು ದಿನಗಳಲ್ಲಿ ಆಗಬಹುದು ಎಂದು ರಾಹುಲ್ ಗಾಂಧಿ ಪರ ವಕೀಲ ಪಿಎಸ್ ಚಪನೇರಿ ತಿಳಿಸಿದ್ದಾರೆ. ಅರ್ಜಿ ವಿಚಾರಣೆಯಿಂದ ಹಿಂದೆ ಸರಿಯಲು ಅವರು ಕಾರಣ ಬಹಿರಂಗಪಡಿಸಿಲ್ಲ.
2019ರಲ್ಲಿ ರಾಹುಲ್ ಗಾಂಧಿಯವರು ಕೋಲಾರದಲ್ಲಿ ಮಾತನಾಡುತ್ತ, ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರೇ ಎಂದು ಹೇಳಿದ್ದರು. ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ವಿರುದ್ಧ ಸೂರತ್ ಕೋರ್ಟ್ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ರಾಹುಲ್ ಗಾಂಧಿಯವರಿಗೆ ಸೂರತ್ ಕೆಳನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದಾಗದೆ ಇದ್ದರೆ, ಅವರು ಮುಂದಿನ 8ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸುವ ಅರ್ಹತೆಯನ್ನೂ ಕಳೆದುಕೊಳ್ಳುತ್ತಾರೆ. ರಾಹುಲ್ ಗಾಂಧಿ ಈಗಾಗಲೇ ದೆಹಲಿಯಲ್ಲಿರುವ ತಮ್ಮ ಸರ್ಕಾರಿ ಬಂಗಲೆಯನ್ನೂ ಖಾಲಿ ಮಾಡಿ, ತಾಯಿ ಸೋನಿಯಾ ಗಾಂಧಿ ಮನೆ ಸೇರಿಕೊಂಡಿದ್ದಾರೆ.